ಮಂಗಳೂರು, ಜುಲೈ 01 (DaijiworldNews/SM): ಮಂಗಳೂರು ಉತ್ತರ ಕ್ಷೇತ್ರದ ಶಾಸಕರೇ ನಿಮಗೆ ಮತ ನೀಡಿದ ಜನರಿಗೆ ನ್ಯಾಯ ಕೊಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಅಥವಾ ವೈದ್ಯ ವೃತ್ತಿ ಮುಂದುವರೆಸಿ ಎಂದು ಮಾಜಿ ಶಾಸಕ ಮೊಯ್ದೀನ್ ಬಾವ ವಾಗ್ದಾಳಿ ನಡೆಸಿದ್ದಾರೆ. ಸುರತ್ಕಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ದಿನದ ಮಳೆಗೆ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಭಾರೀ ಹಾನಿ ಉಂಟಾಗಿದೆ. ಕ್ಷೇತ್ರದ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ಜನರ ಹಾಗೂ ಪ್ರಾಣಿಗಳ ಅವಸ್ಥೆ ಶೋಚನೀಯವಾಗಿದೆ. ಈ ಬಗ್ಗೆ ನಮ್ಮ ತಂಡ ವೀಕ್ಷಿಸಿ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗೆ ಪರಿಸ್ಥಿತಿ ಬಗ್ಗೆ ವಿವರಣೆ ನೀಡಿದ್ದೇವೆ. ಆದರೆ ಈ ಕ್ಷೇತ್ರದಿಂದ ಆಯ್ಕೆಯಾದ ಪಾಲಿಕೆ ಕಾರ್ಪೋರೇಟರ್ ಅಥವಾ ಶಾಸಕರು ಶಾಶ್ವತ ಪರಿಹಾರ ಮಾಡುತ್ತಿಲ್ಲ. ಇದಕ್ಕೆಲ್ಲಾ ಯಾರು ಹೊಣೆ ಎಂದು ಪ್ರಶ್ನಿಸಿದರು. ಸ್ಮಾರ್ಟ್ ಸಿಟಿ ಹೆಸರಲ್ಲಿ ಬಂದಿರುವ 2 ಸಾವಿರ ಕೋಟಿ ಹಣ ಶಾಸಕರು ಎಲ್ಲಿಗೆ ಖರ್ಚು ಮಾಡಿದ್ದಾರೆ. ಜೊತೆಗೆ ಈ ಹಿಂದೆ ಸುರತ್ಕಲ್-ಕೈಕಂಬದವರೆಗೆ 6 ಪಥದ ರಸ್ತೆ ನಿರ್ಮಾಣಕ್ಕೆ ಬಜೆಟ್ನಲ್ಲಿ ಹಣ ಬಿಡುಗಡೆಯಾಗಿದೆ. ಆದರೆ ಇದರಲ್ಲಿ ಒಬ್ಬನಿಗೆ ಟೆಂಡರ್ ಆಗಿದ್ದನ್ನು ಕ್ಯಾನ್ಸಲ್ ಮಾಡಿಸಿ ಮತ್ತೆ ಎರಡನೇ ಟೆಂಡರ್ ಕರೆಯಲು ಗತಿ ಇಲ್ಲದಂತಾಗಿದೆ.
ಅದಕ್ಕಿಟ್ಟ 60 ಕೋಟಿ ದುಡ್ಡು ಎಲ್ಲಿ ಹೋಗಿದೆ ಎಂದು ದೇವರಿಗೆ ಗೊತ್ತು. ಇದರ ಜೊತೆಗೆ ಸುರತ್ಕಲ್ ಮಾರ್ಕೆಟ್ಗೆ 162 ಕೋಟಿ ಯೋಜನೆ ಪ್ರಾರಂಭವಾಗಿ 62 ಕೋಟಿ ಹಣ ಬಿಡುಗಡೆಯಾಗಿತ್ತು. ಕೋರೋನಾ ಕಾರಣ ಕೊಟ್ಟು ಅದನ್ನು ಅರ್ಧಕ್ಕೆ ನಿಲ್ಲಿಸಿ ಬಿಟ್ಟುಬಿಟ್ಟಿದ್ದಾರೆ ಎಂದು ಹೇಳಿದರು.
ಸುರತ್ಕಲ್ ಟೋಲ್ ಪ್ರಾರಂಭವಾಗುವುದನ್ನು ನಾನು 9 ತಿಂಗಳು ತಡ ಮಾಡಿದ್ದೇನೆ. ಜೊತೆಗೆ 3 ಸಲ ಮನೆಗೆ ಬಂದಿದ್ದ ಟೋಲ್ ಗುತ್ತಿಗೆಯವನನ್ನು ಜೋರು ಮಾಡಿ ಮನೆಗೆ ಕಳುಹಿಸಿದ್ದೇನೆ. ಟೋಲ್ ವಿಷಯದಲ್ಲಿ ನಾನು ಒಂದು ರೂಪಾಯಿ ಪಡೆದಿದ್ದರೆ ನಾನು ಸಾರ್ವಜನಿಕ ಜೀವನದಿಂದ ನಿವೃತ್ತಿ ಹೊಂದುತ್ತೇನೆ. ಶಾಸಕರೇ ಕಾಂಟ್ರಕ್ಟರ್ನಿಂದ ಹಣ ತೆಗೆದಿಲ್ಲ ಎಂದು ಶಪಥ ಮಾಡಿ. ಈ ಬಗ್ಗೆ ಕಾಂಟ್ರಕ್ಟರೇ ನನಗೆ ದೂರು ನೀಡಿದ್ದಾರೆ ಎಂದು ಆರೋಪಿಸಿದ ಅವರು ಹೆದ್ದಾರಿ ಸಚಿವರು ಜಿಲ್ಲೆಗೆ ಬಂದಾಗ 1 ಗಂಟೆ ಅಪಾಯಿಂಟ್ಮೆಂಟ್ ತೆಗೆದುಕೊಂಡು ಟೋಲ್ ಬಂದ್ ಆಗದಿದ್ದರೆ ರಾಜೀನಾಮೆ ನೀಡುತ್ತೇನೆ ಎಂದಿದ್ದರೆ ಸುರತ್ಕಲ್ ಜನ ನಿಮ್ಮ ಹಿಂದೆ ನಿಲ್ಲುತ್ತಿದ್ದರು ಎಂದರು. ರಾಜಸ್ತಾನದಲ್ಲಿ ನಡೆದ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಇಸ್ಲಾಂನಲ್ಲಿ ಮತ್ತೊಬ್ಬರಿಗೆ ಬೈಯುವ ಅಥವಾ ಹೊಡೆಯುವುದಕ್ಕೆ ನಿಷೇಧ ಇದೆ. ತಲೆ ಕಡಿದ ಕ್ರೂರಿ ಕೃತ್ಯಕ್ಕೆ ಶೀಘ್ರವಾಗಿ ಅವರನ್ನು ನೇಣು ಹಾಕಬೇಕು ಎಂದು ಹೇಳಿದರು.