ಉಡುಪಿ, ಜುಲೈ 01 (DaijiworldNews/SM): ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಹೊರಗುತ್ತಿಗೆ ನೌಕರರ ಸಂಘ (ವಾಹನ ಚಾಲಕರು, ವಾಟರ್ಮೆನ್, ಲೋಡರ್ಸ್, ಕ್ಲೀನರ್ಸ್, ಯುಜಿಡಿ ಕಾರ್ಮಿಕರು, ಹೆಲ್ಪರ್ಸ್, ಡಾಟಾ ಆಪರೇಟರ್ಗಳು) ಇವುಗಳ ನೇತೃತ್ವದಲ್ಲಿ ಗುತ್ತಿಗೆ ಪದ್ಧತಿ ಬದಲು ಪೌರಕಾರ್ಮಿಕರ ಮಾದರಿಯಲ್ಲಿ ನೇರ ವೇತನಕ್ಕೆ ಆಗ್ರಹಿಸಿ ಹಾಗೂ ಪೌರಕಾರ್ಮಿಕರ ನೇಮಕಾತಿಗೆ ಒತ್ತಾಯಿಸಿ ಇಂದು ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಗೊಂಡರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಅವರೊಂದಿಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪೌರಕಾರ್ಮಿಕರ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ತಕ್ಷಣವೇ ರಾಜ್ಯ ಸರ್ಕಾರವು ಪೌರಕಾರ್ಮಿಕರ ಪ್ರಾಮಾಣಿಕ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಅವರು ಮಾತನಾಡಿ ಸ್ವಚ್ಛ ಮತ್ತು ನಗರ ಪಟ್ಟಣಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕೆಂದರೆ ಪೌರಕಾರ್ಮಿಕರು ಅತ್ಯವಶ್ಯಕವಾಗಿ ಬೇಕೇ ಬೇಕು ಮತ್ತು ಅವರ ಮತ್ತು ಅವರ ಕುಟುಂಬದ ಆರೋಗ್ಯವು ಸಹ ಚೆನ್ನಾಗಿರಬೇಕು. ಅವರು ಮಾಡುತ್ತಿರುವಂತಹ ಕೆಲಸವು ಅತ್ಯಂತ ಕಷ್ಟದ ಕೆಲಸವು ಆಗಿರುವುದರಿಂದ ಅವರಿಗೂ ಕೂಡ ಸರಕಾರಿ ನೌಕರರ ಮಾನ್ಯತೆ ನೀಡಬೇಕು. ಪೌರಕಾರ್ಮಿಕರನ್ನು ಹೊರಗುತ್ತಿಗೆಯ ಆಧಾರದಲ್ಲಿ ನೇಮಕ ಮಾಡಿಕೊಳ್ಳದೆ ಸರಕಾರವು ಅವರನ್ನು ನೇರ ನೇಮಕಾತಿ ಮಾಡಬೇಕು. ಕಾಂಟ್ರಾಕ್ಟ್ ಮುಖಾಂತರ ನೇಮಿಸುವುದನ್ನು ನಿಲ್ಲಿಸಬೇಕು ,ಕಾಂಟ್ರಾಕ್ಟ್ ಮೂಲಕದ ನೇಮಕಾತಿಯೂ ದೊಡ್ಡ ಲಾಬಿ ಆಗಿದೆ.
ಪೌರಕಾರ್ಮಿಕರ ದುಡಿಮೆಯಿಂದ ಕಾಂಟ್ರಾಕ್ಟ್ ಪಡೆದವರು ತಮ್ಮ ಲಾಭವನ್ನು ಗಳಿಸುವುದು ಒಂದು ದಂದೆಯಾಗಿ ಬಿಟ್ಟಿದೆ. ಕರ್ನಾಟಕದಲ್ಲಿ 70ಪರ್ಸೆಂಟ್ ನೌಕರರು ಖಾಯಂ ಆಗಬೇಕಿದ್ದರೆ ಅದು ಕಾಂಗ್ರೆಸ್ ಸರ್ಕಾರದ ತೀರ್ಮಾನದಿಂದ ಆಗಿರುವುದು ಎಂದು ತಿಳಿಸಿದರು.
ಪೌರಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ದುಡಿಯುತ್ತಿರುವವರಾಗಿದ್ದಾರೆ ರಾಜ್ಯದಲ್ಲಿ ಪೌರ ಕಾರ್ಮಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯಾವುದೇ ಪಟ್ಟಣವು ಸುಚಿತ್ವವಾಗಿಡಲು ಅಸಾಧ್ಯ. ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ತನ್ನ ಪ್ರಥಮ ಆದ್ಯತೆ ಪೌರಕಾರ್ಮಿಕರಿಗೆ ಇತ್ತು ಆದರೆ ನಾನು ಅದರ ಬಗ್ಗೆ ಯಾವುದೇ ಪ್ರಚಾರ ತೆಗೆದುಕೊಳ್ಳಲು ಹೋಗಲಿಲ್ಲ. ರಾಜಕೀಯ ರಹಿತವಾಗಿ ಪೌರಕಾರ್ಮಿಕರ ಬೇಡಿಕೆಯನ್ನು ಈಡೇರಿಸಲು ನಿಮ್ಮೊಂದಿಗೆ ಹೋರಾಟಕ್ಕೆ ನಾನು ಸದಾ ಸಿದ್ದ ಡಾ. ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸಮಾನತೆಯನ್ನು ಕೊಟ್ಟವರು ಅದರಂತೆ ಪೌರಕಾರ್ಮಿಕರಿಗೆ ನ್ಯಾಯ ಸಿಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಯತೀಶ್ ಕರ್ಕೇರ, ಶರತ್ ಶೆಟ್ಟಿ, ಗಣೇಶ್ ನೆರ್ಗಿ, ಗಣೇಶ್ ದೇವಾಡಿಗ, ಸಾಯಿರಾಜ್ ಕಿದಿಯೂರು, ಸಂಜಯ್ ಆಚಾರ್ಯ ಅವರು ಉಪಸ್ಥಿತರಿದ್ದರು