ಮಂಗಳೂರು, ಜು 01 (DaijiworldNews/DB): ಬ್ರಿಟಿಷರನ್ನು ಭಾರತದಿಂದ ಕಾಲ್ಕೀಳುವಂತೆ ಮಾಡಲು ಅವರೇ ಆರಂಭಿಸಿದ್ದ ದಿ ಬಂಗಾಲಿ ಗೆಝೆಟ್ ಪತ್ರಿಕೆ ಪ್ರಮುಖ ಕಾರಣವಾಗಿತ್ತು. ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಪತ್ರಕರ್ತರ ಪಾತ್ರ ಹಿರಿದು ಎಂದು ದ.ಕ. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಶ್ಮಿ ಎಸ್.ಆರ್. ಅಭಿಪ್ರಾಯಪಟ್ಟರು.
ಪತ್ರಿಕಾ ದಿನಾಚರಣೆಯ ಅಂಗವಾಗಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರೆಸ್ಕ್ಲಬ್ನಲ್ಲಿ ಬ್ರಾಂಡ್ ಮಂಗಳೂರು ಪ್ರಶಸ್ತಿ ವಿಜೇತ ನಾ. ಕಾರಂತ ಪೆರಾಜೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಶುಕ್ರವಾರ ಮಾತನಾಡಿದರು.
ಖಾಸಗಿ ದೃಶ್ಯ ಮಾಧ್ಯಮಗಳು ಆರಂಭವಾದ ನಂತರ ನಮ್ಮ ಸಮಾಜದಲ್ಲಿ ಗುರುತರ ಬದಲಾವಣೆ, ಬೆಳವಣಿಗೆಗಳು ನಡೆದಿವೆ. ಮೊಬೈಲ್ ಜರ್ನಲಿಸಂ ಕೂಡಾ ಸದ್ಯ ಟ್ರೆಂಡ್ ಸೃಷ್ಟಿಸುತ್ತಿದೆ. ಸತ್ಯ ಮತ್ತು ಪ್ರಾಮಾಣಿಕತೆಯ ಪರವಾಗಿ ಪತ್ರಕರ್ತರು ಕೆಲಸ ಮಾಡಿದಾಗ ಸಮಾಜವು ಉತ್ತಮ ಹಾದಿಯಲ್ಲಿ ಸಾಗುತ್ತದೆ. ನೈಜ ವಿಚಾರಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಪತ್ರಕರ್ತರು ಮಾಡಬೇಕು ಎಂದವರು ಹೇಳಿದರು.
ತನಗೆ ಪ್ರಶಸ್ತಿ ನೀಡುವ ಮೂಲಕ ಹಳ್ಳಿಗಳಿಗೆ ಪ್ರಶಸ್ತಿ ನೀಡುವ ಕೆಲಸವನ್ನು ಮಾಡಿದಂತಾಗಿದೆ. ಹಳ್ಳಿಗಳಲ್ಲಿರುವ ಮಾನವೀಯ ಮೌಲ್ಯ, ಸೌಹಾರ್ದದ ನಿಟ್ಟಿನಲ್ಲಿ ಬರೆದ ಲೇಖನಕ್ಕೆ ಸಂದಿರುವ ಗೌರವ ಹಳ್ಳಿಗೇ ಸಂದ ಗೌರವವಾಗಿದೆ ಎಂದು ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆ ಹೇಳಿದರು.
’ಕೋವಿಡ್ ನಂತರ ಮಾಧ್ಯಮದ ಸ್ಥಿತ್ಯಂತರ'ದ ಕುರಿತು ಹಿರಿಯ ಪತ್ರಕರ್ತ ಯು.ಕೆ. ಕುಮಾರನಾಥ್ ಮಾತನಾಡಿದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಪ್ರೆಸ್ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಉಪಸ್ಥಿತರಿದ್ದರು.
ಪುಷ್ಪರಾಜ್ ಬಿ.ಎನ್. ವಂದಿಸಿದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ನಿರೂಪಿಸಿದರು.