ಕುಂದಾಪುರ, ಜು 01 (DaijiworldNews/MS): ಆಜ್ರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಡ್ಲಾಡಿಯಿಂದ ಕೂಡಿಗೆ ಸಂಪರ್ಕ ರಸ್ತೆ ಅಭಿವೃದ್ದಿ ಕಾಣದೆ ಸಂಚಾರಕ್ಕೆ ದುಸ್ತರವಾಗಿದ್ದು ಈ ರಸ್ತೆಯನ್ನು ಕೂಡಲೇ ಅಭಿವೃದ್ದಿ ಪಡಿಸುವಂತೆ ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅನಾದಿ ಕಾಲದ ಈ ರಸ್ತೆಯನ್ನು ಸಂಬಂಧಪಟ್ಟವರು ನಿರ್ಲಕ್ಷ್ಯ ಮಾಡಲಾಗಿದ್ದು ಶೀಘ್ರ ರಸ್ತೆಯನ್ನು ಅಭಿವೃದ್ದಿ ಪಡಿಸದೇ ಇದ್ದರೆ ಮುಂಬರುವ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಕೂಡಿಗೆ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಕೂಡಿಗೆಯ ಸಂಪರ್ಕ ಕಲ್ಪಿಸುವ 3 ಕಿ.ಮೀ ಮಾರ್ಗ ನಡೆದುಕೊಂಡು ಹೋಗಲೂ ಕೂಡಾ ಸಾಧ್ಯವಾಗದಷ್ಟು ಹಾಳಾಗಿದೆ. ಇಲ್ಲಿ ಸುಮಾರು 60 ಮನೆಗಳಿವೆ. ಚಿತ್ತೇರಿ ಗಣಪತಿ ದೇವಸ್ಥಾನವಿದೆ. ಕೃಷಿ ಅವಲಂಬಿತ ಕುಟುಂಬಗಳು ಇಲ್ಲಿವೆ. ಕೃಷಿ ಕಾರ್ಯಕ್ಕೆ ಗೊಬ್ಬರ, ಯಂತ್ರಗಳನ್ನು ತಗೆದುಕೊಂಡು ಹೋಗಲು ಕೂಡಾ ಸಾಧ್ಯವಾಗುತ್ತಿಲ್ಲ. ರಸ್ತೆ ತೀವ್ರ ಹದಗೆಟ್ಟು ಹೋಗಿರುವುದರಿಂದ ತುರ್ತು ಸಂದರ್ಭಗಳಲ್ಲಿ ರಿಕ್ಷಾದವರು ಕೂಡಾ ಬರಲು ಒಪ್ಪುತ್ತಿಲ್ಲ.
ಕೊಡ್ಲಾಡಿಯಿಂದ ಅರ್ಧ ಕಿ.ಮೀ ತನಕ ಡಾಂಬರು ರಸ್ತೆ ಇದ್ದು ಬಳಿಕ ಗ್ರಾಮೀಣ ಪ್ರದೇಶ ಆದ್ದರಿಂದ ರಸ್ತೆ ದುರಸ್ತಿ ಕಾಣದೆ, ಸೂಕ್ತ ಚರಂಡಿಯ ವ್ಯವಸ್ಥೆಯೂ ಇಲ್ಲದೆ ಸಂಚಾರಕ್ಕೆ ತೊಡಕಾಗಿದೆ. ಇಲ್ಲಿ ಶಾಲೆ ಅಂಗನವಾಡಿ ಇದ್ದು 40 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ರಿಕ್ಷಾ, ಅಡುಗೆ ಅನಿಲ ಸರಬರಾಜು ವಾಹನಗಳು ಶಾಲೆಯ ತನಕ ಮಾತ್ರ ಬರುತ್ತವೆ. ಮುಂದೆ ಕಲ್ಲು-ಮಣ್ಣಿನ ಕ್ಲಿಷ್ಟಕರ ಮಾರ್ಗವಾದ್ದರೂ ವಾಹನಗಳು ಮುಂದೆ ಬರಲು ಒಪ್ಪುತ್ತಿಲ್ಲ. ಗ್ಯಾಸ್ ಸಿಲಿಂಡರ್, ಪಡಿತರಗಳನ್ನು ತಲೆಹೊರೆಯಲ್ಲಿ ಹೊತ್ತು ಕೊಂಡೇ ಹೋಗಬೇಕಾದ ಪರಿಸ್ಥಿತಿ ಇದೆ.
ಕನಿಷ್ಠ ಮಳೆ ನೀರು ಹರಿದು ಹೋಗಲು ಚರಂಡಿಯೂ ಇಲ್ಲದೇ ನೀರು ರಸ್ತೆಯ ಮೇಲೆಯೇ ನಿಲ್ಲುತ್ತದೆ. ಹಾಗಾಗಿ ಮಳೆಗಾಲದಲ್ಲಿ ನಡೆದುಕೊಂಡು ಹೋಗುವುದು ಕೂಡಾ ಕಷ್ಟ. ಅನಾರೋಗ್ಯ ಪೀಡಿತರು, ಗರ್ಬಿಣಿಯರು, ವಯೋವೃದ್ದರು ಆಸ್ಪತ್ರೆಗಳಿಗೆ ಬರುವುದೇ ಕಷ್ಟ. ರಸ್ತೆ ಸಮರ್ಪಕವಾಗಿಲ್ಲದ ಕಾರಣ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದೆ.
ರಸ್ತೆ ಅಭಿವೃದ್ದಿಗೊಳಿಸುವಂತೆ ಸಂಸದರು, ಶಾಸಕರು, ಗ್ರಾಮ ಪಂಚಾಯತ್ಗಳಿಗೆ ಮನವಿ ಸಲ್ಲಿಸಲಾಗಿದೆ. ಕೂಡಿಗೆ ಗ್ರಾಮದ ಅತೀ ಅಗತ್ಯ ಮೂಲಸೌಕರ್ಯ ಒದಗಿಸದೇ ಇದ್ದರೆ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸಲಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಬಚ್ಚಯ್ಯ ಶೆಟ್ಟಿ, ರಾಧಾಕೃಷ್ಣ, ಗೋವಿಂದ ಪೂಜಾರಿ, ತುಂಗ, ವೆಂಕಪ್ಪ ಶೆಟ್ಟಿ, ಸುಭಾಶ್, ಶಂಕರ ಮೊಗವೀರ, ಗಣೇಶ ಮೊದಲಾದವರು ಉಪಸ್ಥಿತರಿದ್ದರು.