ಉಡುಪಿ, ಜ 18(SM): ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿ ಆರಂಭಿಸುವ ಸರ್ಕಾರದ ನಿರ್ಧಾರದ ಬಗ್ಗೆ ಚರ್ಚೆಯಾಗಬೇಕು. ಆಂಗ್ಲ ಮಾಧ್ಯಮಕ್ಕೆ ವಿರೋಧಿಸಿದರೆ ಬಡವರ ಮಕ್ಕಳಿಗೆ ತಡೆ ಎಂಬ ಭಾವನೆ ಉದ್ಭವಿಸುತ್ತಿದೆ. ಹೀಗಾಗಿ ಮಾತೃ ಭಾಷೆ ಬೆಳವಣಿಗೆ ದೃಷ್ಟಿಯಲ್ಲಿ ದೇಶಾದ್ಯಂತ ಏಕರೀತಿಯ ಶಿಕ್ಷಣ ನೀತಿ ಜಾರಿಯಾಗಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.
ಅವರು ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ 48 ಸಾವಿರ ಸರ್ಕಾರಿ ಹಾಗೂ 2 ಸಾವಿರ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಿವೆ. ಸುಮಾರು 1 ಕೋಟಿ ಮಕ್ಕಳು ಅಧ್ಯಯನ ಮಾಡುತ್ತಿದ್ದಾರೆ. 2.5 ಲಕ್ಷ ಮಂದಿ ಶಿಕ್ಷಕರಿದ್ದಾರೆ. 1.5 ಲಕ್ಷ ಬಿಸಿಯೂಟ ಸಿಬ್ಬಂದಿಗಳಿದ್ದಾರೆ. ರಾಜ್ಯದಲ್ಲಿ 2,30000 ಕೋಟಿ ಬಜೆಟ್ ನಲ್ಲಿ ಶೇ. 18ರಷ್ಟು ಶಿಕ್ಷಣಕ್ಕೆ ವೆಚ್ಚ ಮಾಡಲಾಗುತ್ತಿದೆ. ಆದರೆ 15 ಸಾವಿರ ಶಾಲೆಗಳಲ್ಲಿ ಶೌಚಾಲಯಗಳಿಲ್ಲ.
ಒಟ್ಟು ರಾಜ್ಯದ 45,000 ಸರಕಾರೀ ಶಾಲೆಗಳಲ್ಲಿ 7 ಸಾವಿರ ಶಾಲೆಗಳಲ್ಲಿ ಕುಡಿಯುವ ನೀರಿಲ್ಲ. ಹಾಗಾಗಿ ವ್ಯವಸ್ಥೆ ಇರುವ ಖಾಸಗಿ ಶಾಲೆಗಳಿಗೆ ಮಕ್ಕಳು ಆಕರ್ಷಿತರಾಗುತ್ತಾರೆ. ಆದರೆ ಸರಕಾರವೇ 1 ಸಾವಿರ ಆಂಗ್ಲ ಶಾಲೆ ತೆರೆಯಲು ಅನುಮತಿ ಕೊಟ್ಟಿದೆ. ಅನುಮತಿಯನ್ನು ಆಕ್ಷೇಪಿಸಿದರೆ ಬಡ ಮಕ್ಕಳಿಗೆ ಭೇದ ತೋರಿದಂತೆ. ಇದಕ್ಕೆಲ್ಲ ಏಕರೀತಿ ಶಿಕ್ಷಣ ನೀತಿ ಜಾರಿಯಾಗಲಿ. ಶಿಕ್ಷಣದಲ್ಲಿ ಸಮಾನತೆ ತರಲು ಸರಕಾರೀಕರಣವಾಗಲಿ, ಎಂದು ಮಾತ್ರ ಸರಕಾರವನ್ನು ಒತ್ತಾಯ ಪಡಿಸಬಹುದು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.