ಸುಳ್ಯ, ಜ 01(DaijiworldNews/HR): ಸುಳ್ಯ ತಾಲೂಕಿನ ಹಲವೆಡೆ ಇಂದು ಮತ್ತೆ ಎರಡನೇ ಭಾರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಬೆಳ್ಳಗ್ಗೆ 10.45 ರ ವೇಳೆಗೆ ಭೂಮಿ ಮತ್ತೊಮ್ಮೆ ಕಂಪಿಸಿದ್ದು, ಭೂಕಂಪನ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.1 ರಷ್ಟಿದೆ.
ಉಬರಡ್ಕದ ಕೆದಂಬಾಡಿಯಲ್ಲಿ ಭೂಮಿ ಅದುರಿದ್ದು, ಅರಂಬೂರು, ಅರಂತೋಡು, ತೋಡಿಕಾನ ಮೊದಲಾದ ಕಡೆಗಳಲ್ಲೂ ಲಘು ಕಂಪನ ನಡೆದಿರುವುದಾಗಿ ಸ್ಥಳೀಯರು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಕಳೆದೊಂದು ವಾರದಿಂದ ಐದು ಭಾರಿ ಭೂಮಿ ಕಂಪಿಸಿ ಜನರಲ್ಲಿ ಆತಂಕ ಸೃಷ್ಟಿಯಾಗಿದ್ದು, ಭಯದಲ್ಲೇ ಜೀವನ ಸಾಗಿಸುವಂತಾಗಿದೆ.
ಇನ್ನು ಮಧ್ಯ ರಾತ್ರಿ 1.15 ರ ಸುಮಾರಿಗೆ ಈ ಕಂಪನ ಉಂಟಾಗಿದ್ದು ಆರಂಭದಲ್ಲಿ ದೊಡ್ಡ ಶಬ್ದ ಕೇಳಿತು. ಬೆನ್ನಿಗೇ ಅಲುಗಾಡಿದ ಅನುಭವವಾಯಿತು ಎಂದು ಜನ ಹೇಳಿಕೊಂಡಿದ್ದಾರೆ. ಕೆಲವರಿಗೆ ಒಂದೆರಡು ಸೆಕೆಂಡುಗಳ ವ್ಯತ್ಯಾಸದಲ್ಲಿ ಎರಡು ಬಾರಿ ಈ ಅನುಭವವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.