ಸುಳ್ಯ, ಜು 01 (DaijiworldNews/MS): ಸುಳ್ಯ ತಾಲೂಕಿನ ಹಲವೆಡೆ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಮಧ್ಯ ರಾತ್ರಿ 1.15 ರ ಸುಮಾರಿಗೆ ಗಾಢ ನಿದ್ರೆಯಲ್ಲಿದ್ದ ಜನರನ್ನು ಕಂಪನ ಹಾಗೂ ಶಬ್ದ ಬಡಿದೆಬ್ಬಿಸಿ ಆತಂಕಕ್ಕೆ ನೂಕುವಂತೆ ಮಾಡಿದೆ.
ಕಳೆದೊಂದು ವಾರದಿಂದ ಮೂರು ಬಾರಿ ಭೂಮಿ ಕಂಪಿಸಿ ಆತಂಕ ಸೃಷ್ಟಿಯಾದ ಅದೇ ಪರಿಸರದಲ್ಲಿ ಶುಕ್ರವಾರ ಶನಿವಾರದ ನಡುವಿನ ಮಧ್ಯರಾತ್ರಿ ವೇಳೆಗೆ ಮತ್ತೆ ಭೂಕಂಪನವಾಗಿದೆ.
ಮಧ್ಯ ರಾತ್ರಿ 1.15 ರ ಸುಮಾರಿಗೆ ಈ ಕಂಪನ ಉಂಟಾಗಿದ್ದು ಆರಂಭದಲ್ಲಿ ದೊಡ್ಡ ಶಬ್ದ ಕೇಳಿತು. ಬೆನ್ನಿಗೇ ಅಲುಗಾಡಿದ ಅನುಭವವಾಯಿತು ಎಂದು ಜನ ಹೇಳಿಕೊಂಡಿದ್ದಾರೆ. ಕೆಲವರಿಗೆ ಒಂದೆರಡು ಸೆಕೆಂಡುಗಳ ವ್ಯತ್ಯಾಸದಲ್ಲಿ ಎರಡು ಬಾರಿ ಈ ಅನುಭವವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಸಂಪಾಜೆ, ಚೆಂಬು, ತೊಡಿಕಾನ, ಪೆರಾಜೆ, ಬಡ್ಡಡ್ಕ, ಸುಳ್ಯ, ಉಬರಡ್ಕ, ಎಲಿಮಲೆ, ಗುತ್ತಿಗಾರು ಪರಿಸರಗಳಲ್ಲಿ ಈ ಕಂಪನದ ಅನುಭವವಾಗಿದೆ.
ಕಳೆದ ಎರಡು ವಾರಗಳಲ್ಲಿ ಇದು ನಾಲ್ಕನೇ ಬಾರಿಯ ಕಂಪನವಾಗಿದ್ದು ಕಂಪನದ ತೀವ್ರತೆ ಇನ್ನಷ್ಟೇ ತಿಳಿದು ಬರಬೇಕಾಗಿದೆ.