ನವದೆಹಲಿ,ಜ 18 (MSP): ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಿದ ಕನಕದುರ್ಗಾ ಮತ್ತು ಬಿಂದು ಎಂಬಿಬ್ಬರು ಮಹಿಳೆಯರಿಗೆ 24ಗಂಟೆಗಳ ಕಾಲ ಭದ್ರತೆ ಕೊಡುವಂತೆ ಕೇರಳ ಪೊಲೀಸರಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಭದ್ರತೆಯ ಅಗತ್ಯವಿದೆ ಎಂದು ಈ ಇಬ್ಬರು ಮಹಿಳೆಯರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅವರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್ ಮತ್ತು ನ್ಯಾಯಾಧೀಶರಾದ ಎಲ್.ಎನ್. ರಾವ್ ಮತ್ತು ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ರಕ್ಷಣೆ ನೀಡುವಂತೆ ಕೇರಳ ಸರ್ಕಾರಕ್ಕೆ ಆದೇಶ ನೀಡಿದೆ.
ಇದಲ್ಲದೆ ಇವರು ಸಲ್ಲಿಸಿದ ಅರ್ಜಿಯಲ್ಲಿ ಎಲ್ಲಾ ಮಹಿಳೆಯರ ಯಾವುದೇ ಅಡೆತಡೆಗಳಿಲ್ಲದೇ ದೇಗುಲ ಪ್ರವೇಶಿಸಬೇಕು, ಅವರಿಗೆ ರಕ್ಷಣೆ ನೀಡಬೇಕು, ಮಹಿಳೆ ಪ್ರವೇಶಿದ ಬಳಿಕ ಶುದ್ದೀಕರಣ ಮಾಡದಂತೆ ತಡೆಯಬೇಕು ಎಂಬಿತ್ಯಾದಿ ವಿಚಾರಗಳನ್ನು ಉಲ್ಲೇಖಿಸಿದ್ದರು. ಆದರೆ ಭದ್ರತೆಯ ವಿಚಾರವನ್ನು ಮಾತ್ರ ಪರಿಗಣಿಸಿದ ಪೀಠ, ಇತರ ವಿಚಾರಗಳನ್ನು ಚರ್ಚಿಸುವ ಅಗತ್ಯತೆ ಈಗಿಲ್ಲ , ಅಲ್ಲದೇ ಇತರ ಯಾವುದೇ ಭಕ್ತಾಧಿಗಳು ಮನರಂಜನೆಗಾಗಿ ಈ ರೀತಿಯ ಅರ್ಜಿ ಸಲ್ಲಿಸುವಂತಿಲ್ಲ ಎಂದು ನ್ಯಾಯಪೀಠ ಖಡಕ್ ಸೂಚನೆ ನೀಡಿದೆ.
ದೇಗುಲ ಪ್ರವೇಶಿಸಿ ಅಜ್ಞಾತವಾಸದಲ್ಲಿದ್ದ ಕನಕಾದುರ್ಗಾ ಹಲವು ದಿನಗಳ ನಂತರ ತನ್ನ ಪತಿಯ ಮನೆಗೆ ವಾಪಾಸ್ಸಾದಾಗ ಆಕೆಯ ಅತ್ತೆಯಿಂದಲೇ ಹಲ್ಲೆ ನಡೆದಿತ್ತು.