ಬೆಂಗಳೂರು,ಜ 18 (MSP): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ನನ್ನನ್ನು ರಾಜಕಾರಣಕ್ಕೆ ಪ್ರವೇಶಿಸುವಂತೆ ಮಾಡಿದೆ ಎಂದು ಪ್ರಕಾಶ್ ರೈ ಹೇಳಿದ್ದಾರೆ. ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ನಾನು ರಾಜಕೀಯಕ್ಕೆ ಪ್ರವೇಶಿಸುವ ಮುಂಚೆ ಸುಮಾರು ಎರಡು ಮೂರು ತಿಂಗಳು ಚಿಂತಿಸಿದ್ದೇನೆ. ಆ ಬಳಿಕವೇ ನಾನು ಚುನಾವಣೆಯ ಕಣಕ್ಕೆ ಇಳಿಯಲು ನಿರ್ಧರಿಸಿದ್ದು ಎಂದಿದ್ದಾರೆ.
ನಾನು ಹುಟ್ಟಿದ್ದು ಮಾರ್ಥಾಸ್ ಆಸ್ಪತ್ರೆಯಲ್ಲಿ . ನನ್ನ ಹುಟ್ಟು, ಬಾಲ್ಯ, ವಿದ್ಯಾಭ್ಯಾಸ ಸೇರಿದಂತೆ ನನ್ನ ಬದುಕಿನ ಬೇರುಗಳೆಲ್ಲಾ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಹೀಗಾಗಿ ಇದೇ ಭಾಗದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದರು.
ಲೋಕಸಭೆಯಲ್ಲಿ ನಮ್ಮ ಸಂಸದರು ಜನರ ಧ್ವನಿಯಾಗುತ್ತಿಲ್ಲ. ಗೆದ್ದ ನಂತರ ಯಾರದ್ದೋ ಗುಲಾಮರಾಗುತ್ತಾರೆ. ಆದ್ದರಿಂದ ನಾನು ಚುನಾವಣಾ ಕಣಕ್ಕೆ ಇಳಿಯುವ ನಿರ್ಧಾರವನ್ನು ಪ್ರಕಟಿಸಿದ್ದೇನೆ. ಯಾವ ಪಕ್ಷ ನಾನು ಸೇರುವುದಿಲ್ಲ ಸ್ವತಂತ್ರವಾಗಿಯೇ ಇರುತ್ತೇನೆ. ನನ್ನ ಸ್ವಂತಿಕೆ ಬಿಟ್ಟು ಕೊಡುವುದಿಲ್ಲ. ಪ್ರಯಾಣ ಪ್ರಾರಂಭ ಮಾಡಿದ್ದೇನೆ. ಎಲ್ಲಿಗೆ ಹೋಗಿ ನಿಲ್ಲುತ್ತದೆಯೋ ಗೊತ್ತಿಲ್ಲ ಎಂದರು. ಮತ ವಿಭಜನೆಯ ಭಯ ಕಾಂಗ್ರೆಸ್ ಗೆ ಇದ್ದರೆ ಅವರು ನನ್ನನ್ನು ಬೆಂಬಲಿಸಲಿ ಆದರೆ ನಾನು ಯಾವ ಪಕ್ಷವನ್ನು ಸೇರುವುದಿಲ್ಲ ಎಂದು ಹೇಳಿದರು.