ಉಳ್ಳಾಲ, ಜೂ 29 (DaijiworldNews/SM): ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಚೆಂಬುಗುಡ್ಡೆ ಅಂಬೇಡ್ಕರ್ ನಗರದ ಭಾಸ್ಕರ್ ಎಂಬವರ ಮನೆಯ ಹಂಚಿನ ಛಾವಣಿ ಕುಸಿದು ಬಿದ್ದ ಘಟನೆ ಬುಧವಾರ ಮುಂಜಾನೆ ನಡೆದಿದೆ. ಕೋಣೆಯಲ್ಲಿ ಮಲಗಿದ್ದ ಭಾಸ್ಕರ್ ದಂಪತಿ ಅಪಾಯದಿಂದ ಪಾರಾಗಿದ್ದಾರೆ.
ಛಾವಣಿ ಕುಸಿದು ಬಿದ್ದ ವೇಳೆ ಭಾಸ್ಕರ್ ಮತ್ತು ಅವರ ಪತ್ನಿ ಕೋಣೆಯೊಳಗೆ ಮಲಗಿದ್ದು ಮಂಚದ ಪಕ್ಕಕ್ಕೆ ಹಂಚಿನ ರಾಶಿಯೇ ಬಿದ್ದಿದ್ದು ಭಾಸ್ಕರ್ ಅವರ ಕಾಲಿಗೆ ಗಾಯವಾಗಿದೆ. ಮನೆಯಲ್ಲಿದ್ದ ಅವರ ಇಬ್ಬರು ಮಕ್ಕಳೂ ಅಪಾಯದಿಂದ ಪಾರಾಗಿದ್ದಾರೆ.
ಭಾಸ್ಕರ್ ಅವರದ್ದು ತೀರಾ ಬಡ ಕುಟುಂಬವಾಗಿದ್ದು ವಾಸವಿರಲು ಮನೆಯೇ ಇಲ್ಲದಂತಾಗಿದೆ. ಘಟನಾ ಸ್ಥಳಕ್ಕೆ ಶಾಸಕ ಯು.ಟಿ ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆ ಕುಸಿದು ಬಿದ್ದರೆ ಮನೆಯ ಅಗತ್ಯ ಸಾಮಗ್ರಿಗಳು ಹಾಳಾಗಿರುತ್ತದೆ. ಈ ಕಾರಣದಿಂದ ತುರ್ತು ಪರಿಹಾರ ಮೊತ್ತವನ್ನು ಸರ್ಕಾರ ನೀಡಬೇಕು. ಬಳಿಕ ಇಂಜಿನಿಯರ್ ಪರಿಶೀಲನೆ ನಡೆಸಿ ಪರಿಹಾರ ಮೊತ್ತ ನಿಗದಿ ಪಡಿಸಿ ಒದಗಿಸಬೇಕು. ಆದಷ್ಟು ಬೇಗ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ವ್ಯವಸ್ಥೆ ಮಾಡುತ್ತಾರೆ ಎಂದು ಹೇಳಿದರು. ಭಾಸ್ಕರ್ ಕುಟುಂಬಕ್ಕೆ ಐದು ಲಕ್ಷ ಪರಿಹಾರ ಘೋಷಣೆ ಮಾಡಿ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮನೆ ಒದಗಿಸುವ ಬಗ್ಗೆ ವ್ಯವಸ್ಥೆ ಮಾಡಲಾಗುವುದು ಎಂದು ತಹಶೀಲ್ದಾರ್ ಗುರುಪ್ರಸಾದ್ ಹೇಳಿದ್ದಾರೆ. ಸ್ಥಳಕ್ಕೆ ಉಳ್ಳಾಲ ನಗರ ಪೌರಾಯುಕ್ತೆ ವಿದ್ಯಾ ಕಾಳೆ ಭೇಟಿ ನೀಡಿದ್ದಾರೆ.