ಪುತ್ತೂರು, ಜ 18 (MSP): ತುಳುನಾಡು ಹಲವಾರು ದೈವ ದೇವರುಗಳ ನೆಲೆಬೀಡು. ತುಳು ನಾಡಿನಲ್ಲಿ ಹೆಜ್ಜೆಗೊಂದರಂತೆ ದೈವಸ್ಥಾನ ದೇವಸ್ಥಾನಗಳು ಕಾಣಸಿಗುತಿದೆ. ಇಂಥಹ ಪುಣ್ಯಭೂಮಿಯಲ್ಲಿ ದೈವೀ ಪವಾಡಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಇಂತಹ ಒಂದು ಪವಾಡ ಪುತ್ತೂರು ತಾಲೂಕಿನ ಪಾಪೆಮಜಲು ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಪುರಾತನ ಕೋಟಿ ಚೆನ್ನಯ್ಯ ಗರಡಿಯಲ್ಲಿ ನಡೆದಿದೆ.
ತುಳುನಾಡಿನ ಐತಿಹಾಸಿಕ ವೀರ ಪುರುಷರಾದ ಕೋಟಿ-ಚೆನ್ನಯ ಗರಡಿ ಇರುವ ಸ್ಥಳದಲ್ಲಿ ನೀರಿನ ಕೊರತೆ ಎದುರಾದ ಸಂದರ್ಭದಲ್ಲಿ ಕೈಲಾದ ಪ್ರಯತ್ನ ಮಾಡಿ ಫಲ ಕಾಣದೇ ಇದ್ದಾಗ ಗರಡಿಯ ಉಸ್ತುವಾರಿಗಳು ಕಳೆದ ಬಾರಿ ನಡೆದ ಭೂತಗಳ ನರ್ತನದ ಸಮಯದಲ್ಲಿ ಈ ದೈವಗಳ ಮುಂದೆ ನೀರಿನ ಸಮಸ್ಯೆಯನ್ನು ತೊಡಿಕೊಂಡು ಪ್ರಾರ್ಥಿಸಿದ್ದರು.
ಆ ಸಂದರ್ಭದಲ್ಲಿ ಅವಳಿ ದೈವಗಳು ಅಭಯ ನೀಡಿ ತಮ್ಮ ಬಿರು ಸುರ್ಯೆ (ಆಯುಧ) (ದೈವದ ಮಾತು - ಸತ್ಯೋಡ್ ಬತ್ತುಂಡ ತಿಗಲೆಡ್ ಸಾದಿ ಕೊರ್ಪ, ಅನ್ಯಾಯಡ್ ಬತ್ತುಂಡ ಸುರ್ಯೋಡ್ ಸಾದಿ ತೋಜಾವ) ವನ್ನು ನೆಲಕ್ಕೆ ಚುಚ್ಚಿ ಗುರುತು ಮಾಡಿ ಅದೇ ಸ್ಥಳದಲ್ಲಿ ಕೊಳವೆ ಬಾವಿ ಕೊರೆಯುವಂತೆ ಸೂಚಿಸಿದ್ದರು.
ದೈವದ ನಿರ್ದೇಶನದಂರೆ ಎರಡು ದಿನಗಳ ಹಿಂದೆ ದೈವಗಳು ಬಿರು ಸುರ್ಯೆ ದಲ್ಲಿ ಸೂಚಿಸಿದ ಸ್ಥಳದಲ್ಲೇ ಕೊಳವೆ ಬಾವಿ ಕೊರೆಯುವ ಕಾಮಗಾರಿ ಆರಂಭಿಸಲಾಗಿತ್ತು. ಇದೀಗ ಬಾವಿ ಕೊರೆಯುತ್ತಿದ್ದ ಸ್ಥಳದಲ್ಲಿ ಭೂಮಿಯಡಿಯಿಂದ ರಭಸದಿಂದ ನೀರು ಹೊರ ಚಿಮ್ಮಿದ್ದು, ಸ್ಥಳೀಯರ ವಿಸ್ಮಯಕ್ಕೆ ಕಾರಣವಾಗಿದೆ.
ಕೊಳವೆ ಭಾವಿಯಲ್ಲಿ ಧಾರಳ ನೀರು ಲಭ್ಯವಾಗಿದ್ದು ಮಾತ್ರವಲ್ಲದೇ, ಬೋರ್ ಕೊರೆಯುವಾಗ ನಾಲ್ಕು ಇಂಚು ನೀರು ಸಿಕ್ಕಿದ್ದು, ಒತ್ತಡಕ್ಕೆ ನೀರು ಆಳೇತ್ತರಕ್ಕೆ ಚಿಮ್ಮಿತ್ತು.ಹೀಗಾಗಿ ಕೇವಲ ಆಯುಧವನ್ನು ಚುಚ್ಚಿ ನೀರು ಶೋಧಿಸಿ ವೈಜ್ಞಾನಿಕ ತಂತ್ರಜ್ಞಾನಕ್ಕೆ ಸವಾಲು ಹಾಕಿದ್ದು ಮಾತ್ರವಲ್ಲದೇ ಬೋರ್ ಕೊರೆಯುವಾಗ ಸ್ವತ: ನೀರಿನಲ್ಲಿ ಪ್ರಕಟಗೊಂಡು ದೈವ ಅಭಯ ನೀಡಿದೆ ಎನ್ನುವುದು ಅವಳಿ ವೀರಪುರುಷರ ಭಕ್ತರ ಅಭಿಮತ.