ಮಂಗಳೂರು,ಜ 18 (MSP): ಗುಡ್ಡ ಪ್ರದೇಶವೊಂದರಲ್ಲಿ ಬೆಂಕಿಯ ಕೆನ್ನಾಲಿಗೆ ಕಾಣಿಸಿಕೊಂಡು ಸುಮಾರು 15 ಎಕರೆ ಪ್ರದೇಶಕ್ಕೆ ಬೆಂಕಿ ಹರಡಿ ಆತಂಕ ಸೃಷ್ಟಿಯಾದ ಘಟನೆ ಗುರುವಾರ ರಾತ್ರಿ ಮಂಗಳೂರು ಕುಪ್ಪೆಪದವು ಬಳಿ ನಡೆದಿದೆ.
ಗುಡ್ಡದಲ್ಲಿದ್ದ ಪೊದೆಯನ್ನು ತೆಗೆಯುವುದಕ್ಕಾಗಿ ಯಾರೋ ಸಂಜೆ ವೇಳೆಗೆ ಬೆಂಕಿ ಹಚ್ಚಿದ್ದರು. ಆದರೆ ಬೆಂಕಿಯ ಕೆನ್ನಾಲಿಗೆ ಪೊದೆಯಿಂದ ಪೊದೆಗೆ ಹರಡುತ್ತಾ ನೋಡು ನೋಡುತ್ತಲೇ 15 ಎಕರೆ ವ್ಯಾಪ್ತಿಯಲ್ಲಿ ಬೆಂಕಿ ಹರಡಿದೆ. ದೊಡ್ಡ ಪ್ರದೇಶವೊಂದರಲ್ಲಿ ಬೆಂಕಿ ಹರಡಿದ್ದರಿಂದ ಏಕಾಏಕಿ ಹತೋಟಿಗೆ ತರಲು ಸಾಧ್ಯವಾಗಲಿಲ್ಲ. ಬೆಂಕಿಯ ಕೆನ್ನಾಲಿಗೆ ಹರಡುತ್ತಿದ್ದಂತೆ ಸ್ಥಳೀಯ ಹತ್ತಕ್ಕೂ ಹೆಚ್ಚು ಮನೆಗಳ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದರು.
ಇದಲ್ಲದೆ ಮುನ್ನೆಚ್ಚರಿಕೆಯ ಕ್ರಮವಾಗಿ ಅಲ್ಲಿಯೇ ಸನಿಹದಲ್ಲಿದ್ದ ಪೆಟ್ರೋಲ್ ಪಂಪನ್ನು ಬಂದ್ ಮಾಡಲಾಗಿತ್ತು. ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರು ಸೇರಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಶ್ರಮಿಸಿದ್ದು, ಕಾರ್ಯಾಚಣೆ ತಡರಾತ್ರಿವರೆಗೂ ಮುಂದುವರಿದಿದ್ದು ಬಳಿಕ ಬೆಂಕಿ ಹತೋಟಿಗೆ ತಂದಿದ್ದಾರೆ.
ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.