ಕಾರ್ಕಳ, ಜೂ 28 (DaijiworldNews/MS): ಜಾನಪದ ಹಾಡುಗಳು ಹಳೆ ತಲೆಮಾರಿಗೆ ಸೀಮಿತವಲ್ಲ. ತುಳುನಾಡಿನ ಜನಪದ ಹಾಡುಗಳು ವೃತ್ತಿ ಕ್ಷೇತ್ರಗಳಲ್ಲಿ ಬಹಳ ಪ್ರಾಮುಖ್ಯತೆ ಪಡೆದಿದೆ. ಭತ್ತದ ನಾಟಿಯ ಸಮಯದಲ್ಲಿ ತಮ್ಮ ಆಯಾಸಗಳನ್ನು ದೂರಮಾಡಲು ಹಾಡು,ಹರಟೆ, ಒಗಟು, ಎದುರುಗತೆ ಉರಲ್ ಹಾಡಿ ರಂಜಿಸುತ್ತಿದ್ದರು . ಇವುಗಳನ್ನು ಕೇಳುವುದೇ ಚಂದ . ಸುಶ್ರಾವ್ಯ ಹಾಡುಗಳು ಮೈಮನಗಳನ್ನು ಸೆಳೆದು ಬಿಡುತ್ತವೆ. ಈ ಹಾಡುಗಳು ಒಂದು ಕಾಲದ ಗತ ವೈಭವದ ಇತಿಹಾಸವನ್ನು ಸಾರುತ್ತದೆ. ಬದುಕಿನ ಚಿತ್ರಣ ಗಳನ್ನು ತೆರೆಡಿಡುತ್ತದೆ. ಓ ಬೇಲೆ ಓಬೇಲೆ, ಹೊಯ್ಯಾ ಹೊಯ್ಯಾ ಹಾಡುಗಳು ಕೋಟಿಚೆನ್ನಯ್ಯರಪಾರ್ದನಗಳು, ರಾಜಮಹರಾಜರ ಕಥೆಗಳು, ಗರ್ಭಿಣಿ ಸ್ತ್ರೀಯ ತುಮುಲಗಳು, ಸೀಮಂತದ ಹಾಡುಗಳು ಒಂಟಿ ಮಹಿಳೆಯ ಹಾಡು, ಗುಮ್ಮನ ಕಥೆಗಳು ಪ್ರಾಣಿ ಪಕ್ಷಿಗಳ ಹಾಡುಗಳು, ಗುಡು ಗುಡು ಗುಂಟಪ್ಪನ ಕಥೆಗಳು ಕೇಳುವ ಮೂಲಕ ವಿಶಾಲ ಭತ್ತದ ಗದ್ದೆಗಳಲ್ಲಿ ಹೊಸ ವಾತಾವರಣವನ್ನು ಸೃಷ್ಟಿಸುತ್ತವೆ .
ಇಂತಹ ದೃಶ್ಯಾವಳಿ ಕಂಡುಬಂದಿರುವುದು ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಎಣ್ಣಿಹೊಳೆಯ ಕುಮೇರಿ ಮನೆ ಸುಂದರ ಶೆಟ್ಟಿ ಯವರ ಕಂಬಳಗದ್ದೆಯಲ್ಲಿ. ಸುಮಾರು 85 ವರ್ಷ ಹಿರಿ ವಯಸ್ಸಿನ ಸುಂದರ ಶೆಟ್ಟಿ ತಮ್ಮ ಐದು ಎಕರೆ ಗದ್ದೆಪ್ರತಿ ವರ್ಷ ಬೇಸಾಯ ಮಾಡುತಿದ್ದಾರೆ. ಸಾಂಪ್ರಾದಾಯಿಕ ನಾಟಿಗೆ ಕೂಲಿಕಾರ್ಮಿಕರ ಅಲಭ್ಯತೆ ಇದ್ದರು ಕೂಡ ಆಸುಪಾಸಿನ ಗ್ರಾಮಗಳಿಂದ ಕೆಲಸಗಾರರನ್ನು ಕರೆಸಿಕೊಂಡು ನೇಜಿ ನೆಡುತ್ತಾರೆ. ಜೂ. 27ರಂದು ಇಪ್ಪತೈದಕ್ಕು ಹೆಚ್ಚು ಮಂದಿ ನೇಜಿ ನಾಟಿ ಮಾಡುತ್ತ ಹಾಡು , ಪಾರ್ದನಗಳನ್ನು ಹಾಡುತ್ತಾ ಮೌಖಿಕ ಪ್ರತಿಭೆಯನ್ನು ಅನಾವರಣಗೊಳಿಸಿದರು .
ಎಣ್ಣೆಹೊಳೆಯ ಅಪ್ಪಿ, ಪೈತಾಳದ ವಿಮಲ, ಅಂಡಾರು ಕಂಬಳ ಮನೆಯ ಸುಮತಿ, ಶಿರ್ಲಾಲು ನೇಂದ್ರ ಬೆಟ್ಟಿನ ವಸಂತಿ ಇವರು ಹೊಯ್ಯಾ ಓಬೇಲೆ ಪಾದ್ದನಗಳನ್ನು ಹಾಡಿದರು. ಇತರರು ಅವರೊಂದಿಗೆ ದನಿಗೂಡಿಸಿದರು. ಮನೆಯ ಯಜಮಾನ ಸುಂದರಶೆಟ್ಟಿ ಕೋಣಗಳಿಗೆ ನೇಗಿಲುಕಟ್ಟಿ ಸಾಂಪ್ರದಾಯಿಕ ಉಳುಮೆ ಮಾಡಿ ಉರಲ್ ಹಾಡುವ ಮೂಲಕ ನಾಟಿಗೆ ಚಾಲನೆ ನೀಡಿದರು.
ಸುಂದರ ಶೆಟ್ಟಿ ಪ್ರತಿ ವರ್ಷ ಭತ್ತದ ಕೃಷಿ ಮಾಡುತ್ತಾರೆ . ಕೃಷಿಗಾಗಿ ಅಂಡಾರು ಕೆರ್ವಾಶೆ ಭಾಗಗಳಿಂದ ಕಾರ್ಮಿಕರನ್ನು ಒಂದು ಗೂಡಿಸಿ ನಾಟಿ ಕಾರ್ಯ ಮಾಡುತ್ತಾರೆ. ಆಧುನಿಕತೆಯ ಭರಾಟೆಯಲ್ಲಿ ಭತ್ತದ ಗದ್ದೆಯ ಈ ಹಾಡುಗಳು ನಮ್ಮ ಮುಂದಿನ ತಲೆಮಾರು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಂತಹ ಪ್ರಯತ್ನಗಳು ಅಗತ್ಯವಾಗಿದೆ .
"ಆಧುನಿಕ ಕೃಷಿ ಪದ್ದತಿಯಿದ್ದರು ಕೂಡ ಸಾಂಪ್ರದಾಯಿಕ ಕೃಷಿಪದ್ದತಿಯನ್ನು ಉಳಿಸಿಕೊಂಡು ಬಂದಿದ್ದೇನೆ . ಮುಂದಿನ ತಲೆಮಾರಿಗೆ ತುಳುನಾಡಿನ ಸಂಸ್ಕೃತಿಯನ್ನು ನೆನಪಿಸುವ ಹಾಗೂ ಉಳಿಸುವ ಕಾರ್ಯಕ್ಕೆ ನನ್ನ ಸಣ್ಣ ಪ್ರಯತ್ನ" - ಸುಂದರ ಶೆಟ್ಟಿ ಕುಮೇರುಮನೆ ಎಣ್ಣೆಹೊಳೆ