ಮಂಗಳೂರು, ಜ 17(SM): ಭಾರತ ಸರಕಾರದ ಉದ್ಯಮ ಸಂಸ್ಥೆ ಕೆಐಓಸಿಎಲ್ ಲಿಮಿಟೆಡ್ ತನ್ನ ಸಾಮಾಜಿಕ ಸೇವಾಕಾರ್ಯ ಚಟುವಟಿಕೆಗಳಡಿ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳ ಅಂಗವಾಗಿ ಇತ್ತೀಚೆಗೆ ಯೋಗ ಜಾಗೃತಿ ಶಿಬಿರವನ್ನು ಕಾವೂರಿನ ಟೌನ್ಶಿಪ್ನಲ್ಲಿ ಆಯೋಜಿಸಿತು.
ನೂರಾರು ಮಂದಿ ಯೋಗ, ಪ್ರಾಣಾಯಾಮ ಆಸಕ್ತರು ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನವನ್ನು ಪಡೆದುಕೊಂಡರು. ಖ್ಯಾತ ಯೋಗಾಸನ ಸಂಸ್ಥೆಗಳಲ್ಲಿ ಒಂದಾಗಿರುವ ಪತಂಜಲಿ ಯೋಗ ಸಮಿತಿಯ ಯೋಗ ಗುರುಗಳಾದ ಶ್ರೀಮತಿ ಸುಜಾತಾ, ರಾಘವೇಂದ್ರ ರಾವ್, ಗೋವಿಂದರಾಯ ಪ್ರಭು ಯೋಗಾಭ್ಯಾಸವನ್ನು ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆ ಹಾಗೂ ಪರಿಶುದ್ಧ ಬಟ್ಟೆಬರೆಗಳನ್ನು ಉಪಯೋಗಿಸುವ ಬಗ್ಗೆ ಜಾಗೃತಿ ಮೂಡಿಸಲಾಯಿತು. ಅಲ್ಲದೇ ಶಿಬಿರದಲ್ಲಿ ಪಾಲ್ಗೊಂಡವರಿಗೆ ಪರಿಶುದ್ಧ ಬಟ್ಟೆಯ ಚೀಲಗಳನ್ನು, ಟವೆಲ್ಗಳನ್ನು ವಿತರಣೆ ಮಾಡಲಾಯಿತು.
ವೈದ್ಯಕೀಯ ಶಿಬಿರ :
ಇದಲ್ಲದೇ ನಿಡ್ಡೋಡಿ ಬಂಗೇರಪದವಿನಲ್ಲಿರುವ ನಿವಾಸಿಗಳಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನೂ ಆಯೋಜಿಸಲಾಗಿತ್ತು. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ನುರಿತ ವೈದ್ಯರು ಸಹಭಾಗಿತ್ವ ನೀಡಿ ಶಿಬಿರದಲ್ಲಿ ಪಾಲ್ಗೊಂಡ ರೋಗಿಗಳ ತಪಾಸಣೆ ನಡೆಸಿದರು.
ಪರಿಸರದ ಹಲವು ಮಂದಿ ಶಿಬಿರದಲ್ಲಿ ಪಾಲ್ಗೊಂಡು ವೈದ್ಯಕೀಯ ತಪಾಸಣೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ಪಡೆದುಕೊಂಡರು ಎಂದು ಕೆಐಓಸಿಎಲ್ ಲಿಮಿಟೆಡ್ನ ಮಂಗಳೂರು ವಿಭಾಗದ ಮ್ಯಾನೇಜರ್ ಎಸ್ ಮುರುಗೇಶ್ ಹೇಳಿದರು.