ಪುತ್ತೂರು, ಜೂ 28 (DaijiworldNews/HR): ಕೆವೈಸಿ ಅಪ್ಡೇಟ್ ಮಾಡಲು ಬ್ಯಾಂಕಿನ ಕಸ್ಟಮರ್ ಕೇರ್ಗೆ ಕರೆ ಮಾಡಲು ತಿಳಿಸಿ ಇಂಟರ್ ನೆಟ್ ಬ್ಯಾಂಕಿಂಗ್ ಸಿಸ್ಟಮ್ ಮೂಲಕ ಸಾಲ ಮಂಜೂರಾತಿ ಪಡೆದು ಶಿಕ್ಷಕಿಯೋರ್ವರು 7.47 ಲಕ್ಷ ರೂಪಾಯಿ ಕಳೆದುಕೊಂಡ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ನೆಲ್ಯಾಡಿ ಗ್ರಾಮದ ಕೊಪ್ಪ ಮಾದೇರಿ ನಿವಾಸಿ ಪ್ರಸಕ್ತ ಸರಕಾರಿ ಪ್ರೌಢಶಾಲಾ ಶಿಕ್ಷಕಿ ವಂಚನೆಗೀಡಾದವರು.
ಜೂ. 11ರಂದು ಅವರ ಮಗನ ಮೊಬೈಲ್ಗೆ ಎಟಿಎಂ ಕಾರ್ಡ್ ಬ್ಲಾಕ್ ಆಗಿರುವ ಬಗ್ಗೆ ಮೆಸೇಜ್ ಬಂದಿದ್ದು, ಜೂ. 23ರಂದು 7029216854 ಸಂಖ್ಯೆಯ ಮೊಬೈಲ್ ನಂಬರ್ನಿಂದ ಮೆಸೇಜ್ ಬಂದಿದ್ದು, ಆ ಮೆಸೇಜ್ನಲ್ಲಿ ನಮ್ಮ ಬ್ಯಾಂಕಿನ ಕಸ್ಟಮರ್ ಕೇರ್ ಸಂಖ್ಯೆ 8240871104 ಇದಕ್ಕೆ ಕರೆ ಮಾಡಿ ಕೆವೈಸಿ ಅಪ್ಡೇಟ್ ಮಾಡುವಂತೆ ಸೂಚಿಸಲಾಗಿತ್ತು.
ಇನ್ನು ಬ್ಯಾಂಕಿನಿಂದ ಖಾತೆಯ ಮೊಬೈಲ್ ನಂಬರ್ ಬದಲಾಯಿಸಿರುವ ಬಗ್ಗೆ ವಿಚಾರಿಸಿದಾಗ ಶಿಕ್ಷಕಿಗೆ ತಾವು ಮೋಸ ಹೋಗಿರುವುದು ತಿಳಿದಿದೆ. ಕೂಡಲೇ ಬ್ಯಾಂಕಿಗೆ ಹೋಗಿ ಪರಿಶೀಲಿಸಿದಾಗ ಖಾತೆಗೆ ಜೂ. 23ರಂದು 8 ಲಕ್ಷ ರೂ. ಜಮೆಯಾಗಿದ್ದು, ಆ ಮೊತ್ತದಲ್ಲಿ ಹಂತ ಹಂತವಾಗಿ ಒಟ್ಟು 7.47 ಲಕ್ಷ ರೂ. ಮೊತ್ತವನ್ನು ತೆಗೆದಿದ್ದಾರೆ.
ಈ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಅವರಲ್ಲಿ ವಿಚಾರಿಸಿದಾಗ ದೂರುದಾರರ ಖಾತೆಯಿಂದ 8 ಲಕ್ಷ ರೂ. ಸಾಲ ಪಡೆದಿರುವುದಾಗಿ ತಿಳಿಸಿದ್ದು, ಈ ಬಗ್ಗೆ ಶಿಕ್ಷಕಿ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದಾರೆ.