ಉಡುಪಿ, ಜೂ 28 (DaijiworldNews/MS): ಡಾಮಾರೀಕರಣಗೊಂಡ ರಸ್ತೆಯೊಂದಕ್ಕೆ ಕಾಂಕ್ರೀಟ್ ನ ತೇಪೆ ಕಾಮಗಾರಿ ನಡೆಸಿರುವ "ವಿಚಿತ್ರ ರಿಪೇರಿ ಕೆಲಸ" ಉಡುಪಿಯಲ್ಲಿ ನಡೆದಿದೆ. ಉಡುಪಿಯ ಅಂಬಾಗಿಲು ಮಣಿಪಾಲ ರಸ್ತೆಯಲ್ಲಿ ಈ ಅಪರೂಪದ ಕಾಮಗಾರಿ ನಡೆದಿದೆ.
ಇತ್ತೀಚಿಗಷ್ಟೇ ಅಂಬಾಗಿಲು - ಪೆರಂಪಳ್ಳಿ - ಮಣಿಪಾಲ ರಸ್ತೆಯು ಅಗಲೀಕರಣಗೊಂಡು ಡಾಮರೀಕರಣ ಕಂಡಿತ್ತು. ಸಂಪೂರ್ಣವಾಗಿ ಹೊಸದಾಗಿ ನಿರ್ಮಾಣವಾದ ರಸ್ತೆ ಇದಾಗಿದ್ದು, ಅದರೂ ಕೂಡಾ ಕಾಮಗಾರಿ ಸಂಪೂರ್ಣ ಆಗುವ ಮುನ್ನವೇ ಅಲ್ಲಲ್ಲಿ ಹೊಂಡ ಗುಂಡಿಗಳು ಎದ್ದಿದ್ದವು. ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಕೂಡಲೇ ಎಚ್ಚೆತ್ತ ಗುತ್ತಿಗೆದಾರರು ಹೊಂಡ ಆಗಿರುವ ಸ್ಥಳದಲ್ಲಿ ತರಾತುರಿಯಲ್ಲಿ ತೇಪೆ ಕಾಮಗಾರಿ ನಡೆಸಿದ್ದಾರೆ. ಆದರೆ ವಿಚಿತ್ರ ಎಂಬಂತೆ ಸಂಪೂರ್ಣ ರಸ್ತೆಯು ಡಾಮಾರು ಹೊಂದಿದ್ದು, ಕೇವಲ ತೇಪೆ ಕಾಮಗಾರಿ ನಡೆದ ಸ್ಥಳದಲ್ಲಿ ಮಾತ್ರ ಕಾಂಕ್ರೀಟ್ ತೇಪೆ ಕಂಡುಬರುತ್ತಿದೆ. ಇದರಿಂದಾಗಿ ವಾಹನ ಸವಾರರಿಗೆ ತೀವ್ರ ತೊಂದರೆ ಆಗುತ್ತಿದ್ದು, ಒಮ್ಮೆಲೆ ಎದುರಾಗುವ ಇಂತಹ ರಸ್ತೆಯಲ್ಲಿನ ವ್ಯತ್ಯಾಸ ಗಳಿಂದಾಗಿ ವಾಹನ ಸವಾರರು ನಿಯಂತ್ರಣ ತಪ್ಪುವ ಸಾಧ್ಯತೆ ಕೂಡಾ ಇದೆ.
ಮಾತ್ರವಲ್ಲದೇ ಈ ರಸ್ತೆ ಮುಂದುವರೆದು ಮಣಿಪಾಲದ ಕಾಯಿನ್ ಸರ್ಕಲ್ ಸೇರುತಿದ್ದು ಈ ಭಾಗದಲ್ಲಿ ಕೂಡಾ ಅಪೂರ್ಣ ಕಾಮಗಾರಿಯಿಂದಾಗಿ ಸಾರ್ವಜನಿಕರು ತೀವ್ರ ಸಮಸ್ಯೆ ಅನುಭವಿಸುತಿದ್ದಾರೆ. ಇಲ್ಲಿನ ಸಾಯಿರಾಧ ಗ್ರೀನ್ ವ್ಯಾಲಿ ಬಳಿಯಿಂದ ಸುಮಾರು 100 ಮೀಟರ್ ಅಂತರದಲ್ಲಿ ರಸ್ತೆ ಕಾಮಗಾರಿಯು ಇನ್ನೂ ಆರಂಭವಾಗಿಲ್ಲ. ಈ ಭಾಗದಲ್ಲಿ ಯಾವುದೇ ಸೂಚನಾ ಫಲಕಗಳು ಕೂಡಾ ಹಾಕದೇ ಇಲ್ಲದಿರುವುದು ಕೂಡಾ ವಾಹನ ಸವಾರರಿಗೆ ತೀವ್ರ ಸ್ವರೂಪದ ಅಪಾಯವನ್ನು ಒಡ್ಡುತ್ತಿದೆ.
ಇದೇ ರಸ್ತೆಯಲ್ಲಿ ಮುಂದುವರೆದು ಕ್ಲಬ್ ಎಕ್ಸ್ ಸಟಸಿ ಬಳಿ ಕೂಡಾ ರಸ್ತೆ ಬದಿಯಲ್ಲಿ ಮಣ್ಣನ್ನು ಸಂಗ್ರಹಿಸಿ ಇಡಲಾಗಿದ್ದು ಮಳೆಯ ನೀರು ಹರಿದು ಬರುವಾಗ ಮಣ್ಣನ್ನು ಕೂಡಾ ಹೊತ್ತು ತಂದು ರಸ್ತೆ ಯ ಮೇಲೆ ಸಂಗ್ರಹವಾಗುತಿದ್ದು ವೇಗವಾಗಿ ಬರುವ ವಾಹನಗಳಿಗೆ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಇದೇ ಭಾಗದಲ್ಲಿ ರಸ್ತೆ ದ್ವಿಭಾಜಕದ ಕಾಮಗಾರಿಯನ್ನು ಕೂಡಾ ಗುತ್ತಿಗೆದಾರರು ನಡೆಸುತಿದ್ದು ಈ ಕಾಮಗಾರಿಯ ವಾಹನಗಳು ಕೂಡಾ ರಸ್ತೆಯ ನಡು ಮಧ್ಯದಲ್ಲಿ ನಿಂತು ಇತರ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಿವೆ. ಮಾತ್ರವಲ್ಲದೇ ಯಾವುದೇ ಎಚ್ಚರಿಕೆ ಸೂಚನೆಗಳನ್ನು ಅಳವಡಿಸದೇ ಕಾಮಗಾರಿ ನಡೆಸುವುದು ಎಷ್ಟು ಸರಿ ಎಂಬ ಪ್ರಶ್ನೆ ಕೂಡಾ ಸಾರ್ವಜನಿಕರು ಕೇಳುವಂತಾಗಿದೆ.
ಮುಂದಿನ ದಿನಗಳಲ್ಲಿ ಮಳೆ ತೀವ್ರವಾದ ಸಮಯದಲ್ಲಿ ಇಂತಹ ರಸ್ತೆಯಲ್ಲಿ ಸಂಚರಿಸುವುದು ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸುವುದಂತೂ ಖಂಡಿತ. ಸುಮಾರು 23 ಕೋಟಿ ರುಪಾಯಿ ವೆಚ್ಚದಲ್ಲಿ ಉನ್ನತೀಕರಣಗೊಳ್ಲುತ್ತಿರುವ ಈ ರಸ್ತೆಯು ಸಾರ್ವಜನಿಕರಿಗೆ ಸಂಚಾರ ಸ್ನೇಹಿಯಾಗಿ ನಿರ್ಮಾಣವಾಗಲಿ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.