ಸುಳ್ಯ, ಜೂ 28 (DaijiworldNews/MS): ದಕ್ಷಿಣ ಕನ್ನಡ ಗಡಿಭಾಗವಾದ ಸುಳ್ಯ ತಾಲೂಕಿನಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿದ ಅನುಭವವಾಗಿ ಮನೆಮಂದಿ ಜೀವಭಯದಿಂದ ಹೊರಗೋಡಿ ಬಂದ ಘಟನೆ ಇಂದು ಮುಂಜಾನೆ 7ರ ಸುಮಾರಿಗೆ ನಡೆದಿದೆ.
ಸಂಪಾಜೆ, ಅರಂತೋಡು,ಪೆರಾಜೆ, ಜಾಲ್ಸೂರು, ಉಬರಡ್ಕ, ತೊಡಿಕಾನ, ಮಿತ್ತೂರು ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಭೂಮಿ ಕಂಪಿಸಿದ್ದು, ಜನರು ಭಯಭೀತಗೊಂಡು ಮನೆಯಿಂದ ಹೊರಗೆ ಬಂದಿದ್ದಾರೆ.
ಬೆಳಿಗ್ಗೆ 7.45ರ ಸಮಯದಲ್ಲಿ ಕಂಪನದ ಅನುಭವ ಆಗಿದ್ದು, ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿರುವ ಬಗ್ಗೆ ಸಾರ್ವಜನಿಕರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಕಿಟಕಿ, ಪಾತ್ರೆ , ಮನೆಯೊಳಗಿದ್ದ ವಸ್ತುಗಳು ಕಂಪನದಿಂದ ಅಲುಗಾಡಿದ್ದು ,ಪಾತ್ರೆಗಳೆಲ್ಲವೂ ಕೆಳಗೆ ಬಿದ್ದಿದ್ದು , ಸುಮಾರು 3 - 4 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವ ಆಗಿದೆ.
ಜೂ . 25 ರಂದು ಕೂಡಾ ಭೂಕಂಪನದ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 2.3 ತೀವ್ರತೆಯ ಭೂಕಂಪ ದಾಖಲಾಗಿತ್ತು ಎಂದು ರಾಜ್ಯ ನ್ಯಾಚುರಲ್ ಡಿಸಾಸ್ಟರ್ ಮಾನಿಟರಿಂಗ್ ಸೆಂಟರ್ ತಿಳಿಸಿತ್ತು. ಬೆಳಗ್ಗೆ ಸುಮಾರು 9 ಗಂಟೆ 9 ಸೆಕೆಂಡಿಗೆ ಈ ಭೂಕಂಪನ ದಾಖಲಾಗಿದ್ದು, 4.7 ಕಿಲೋಮೀಟರ್ ಮುಖ್ಯ ಸ್ಥಾನದಿಂದ ಸುತ್ತಳತೆ ವ್ಯಾಪ್ತಿಯಲ್ಲಿ ಭೂಕಂಪನ ಸಂಭವಿಸಿತ್ತು.