ಮಂಗಳೂರು, ಜೂ 27 (DaijiworldNews/DB): ಸಂವಿಧಾನಬದ್ದವಾಗಿ ಮುಸ್ಲಿಮರಿಗೆ ಸಿಗಬೇಕಾದ ಹಕ್ಕುಗಳು ಸಿಗುತ್ತಿಲ್ಲ. ಸಬ್ ಕಾ ಸಾಥ್- ಸಬ್ ಕಾ ವಿಕಾಸ್ ಬಾಯಿಮಾತಿಗಷ್ಟೇ ವಿನಃ ರಾಜ್ಯದಲ್ಲಿ ಪಾಲನೆಯಾಗುತ್ತಿಲ್ಲ ಎಂದು ಬಿಜೆಪಿ ಜಂಟಿ ವಕ್ತಾರ ಅನ್ವರ್ ಮಾಣಿಪ್ಪಾಡಿ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ನನಗೆ ಜೀವ ಬೆದರಿಕೆ ಇದ್ದರೂ ನನ್ನ ಸಮುದಾಯಕ್ಕೆ ಇಲ್ಲದ ರಕ್ಷಣೆ ನನಗೆ ಬೇಡ. ಹೀಗಾಗಿ ಸರ್ಕಾರವು ಮುಸ್ಲಿಮರಿಗೆ ಅನ್ಯಾಯ ಮಾಡುತ್ತಿರುವುದನ್ನು ಪ್ರತಿಭಟಿಸುವ ಸಲುವಾಗಿ ನನಗೆ ನೀಡಿರುವ ಗನ್ ಮ್ಯಾನ್ ಭದ್ರತೆ ಹಾಗೂ ಇತರ ಸವಲತ್ತುಗಳನ್ನು ತ್ಯಜಿಸಿದ್ದೇನೆ. ನನ್ನ ಸಮುದಾಯ ಸೇರಿದಂತೆ ಅಲ್ಪಸಂಖ್ಯಾತರಿಗೆ ಸಮಾನತೆ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದರು.
ಜಾತ್ರೆಯಲ್ಲಿ ವ್ಯಾಪಾರಕ್ಕೆ ಮುಸ್ಲಿಮರಿಗೆ ನಿರ್ಬಂಧ ಹೇರಲಾಗುತ್ತದೆ. ಹಲಾಲ್ ಬಗ್ಗೆ ಅಪಪ್ರಚಾರ ಸೇರಿದಂತೆ ಹಲವು ರೀತಿಯಲ್ಲಿ ಮುಸ್ಲಿಮರಿಗೆ ಅನ್ಯಾಯವಾಗುತ್ತಿದೆ. ಈ ಹಿಂದೆ ಇಂತಹ ವಾತಾವರಣ ಇರಲಿಲ್ಲ. ಪಕ್ಷದಲ್ಲಿರುವ ಯಾರೇ ತಪ್ಪೆಸಗಿದರೂ ನಾನದನ್ನು ನನ್ನ ಪಕ್ಷದವರೆಂದು ನೋಡದೆ ಖಂಡಿಸಿದ್ದೇನೆ. ಈಗಲೂ ಅದನ್ನೇ ಮಾಡುತ್ತಿದ್ದೇನೆ. ನಾನು ಹೇಳುವುದು ಸುಳ್ಳಾದರೆ ಅದನ್ನು ಸಾಬೀತುಪಡಿಸಲಿ ಎಂದು ಸವಾಲೆಸೆದರು.