ಸುಬ್ರಹ್ಮಣ್ಯ, ಜೂ 27 (DaijiworldNews/DB): ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೇಳಿಕೆ ನೀಡಿದವರು ಯಾಕಾಗಿ ಹೇಳಿದ್ದಾರೋ ಗೊತ್ತಿಲ್ಲ. ಅವರು ತಮ್ಮ ಹೇಳಿಕೆಯನ್ನು ಪುನರ್ ಪರಿಶೀಲನೆ ಮಾಡಿಕೊಳ್ಳಲಿ ಎಂದು ಗೃಹ ಸಚಿವ ಆರಗ ಜ್ಣಾನೇಂದ್ರ ಹೇಳಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತ್ಯೇಕ ರಾಜ್ಯ ಹೇಳಿಕೆ ನೀಡುವುದೇ ತಪ್ಪು. ಉಮೇಶ್ ಕತ್ತಿ ಅಥವಾ ಯಾರೇ ಆಗಲಿ ಅವರಿಗೆ ಆ ಭಾಗದ ಅಭಿವೃದ್ದಿಗೆ ಬೊಮ್ಮಾಯಿ ಸರ್ಕಾರದಿಂದ ಸಾಕಷ್ಟು ಅನುದಾನ ನೀಡಲಾಗಿದೆ. ಹೀಗಾಗಿ ಕತ್ತಿ ಅವರು ತಮ್ಮ ಹೇಳಿಕೆಯನ್ನು ಪುನರ್ ಪರಿಶೀಲಿಸಿಕೊಳ್ಳಬೇಕು. ಮುಂದೆಂದೂ ಇಂತಹ ಹೇಳಿಕೆಗಳನ್ನು ನೀಡದಂತೆ ಎಚ್ಚರ ವಹಿಸಬೇಕು ಎಂದರು.
ಪಠ್ಯ ಪುಸ್ತಕದಲ್ಲಿರುವ ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸುವ ಕೆಲಸ ನಡೆದಿದೆ. ಇದರ ಹೊರತು ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಭಾನುವಾರ ರಾತ್ರಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಗೃಹ ಸಚಿವರು ಆಗಮಿಸಿದರು. ಸೋಮವಾರ ಆಶ್ಲೇಷ ಬಲಿ ಸೇವೆ ನೆರವೇರಿಸಿದರು. ಈ ವೇಳೆ ದೇವಳದ ವತಿಯಿಂದ ಸಚಿವರನ್ನು ಗೌರವಿಸಲಾಯಿತು.