ಕಾಸರಗೋಡು, ಜೂ 27 (DaijiworldNews/MS): ಗಲ್ಫ್ ಉದ್ಯೋಗಿಯಾದ ಯುವಕ ಅಬೂಬಕ್ಕರ್ ಸಿದ್ದಿಕ್ ಕೊಲೆಗೆ ಸಂಬಂಧಪಟ್ಟಂತೆ ಪೊಲೀಸರಿಗೆ ಮಹತ್ವದ ಸುಳಿವು ಲಭಿಸಿದ್ದು , ಹತ್ತು ಮಂದಿ ಈ ಕೃತ್ಯದಲ್ಲಿ ಶಾಮೀಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅಬೂಬಕ್ಕರ್ ಸಿದ್ದಿಕ್
ಶಾಫಿ, ಫಾಯಿಸ್ , ನೂರ್ ಷಾ ಸೇರಿದಂತೆ ಪೈವಳಿಕೆ ಯ ಹತ್ತು ಮಂದಿಯ ತಂಡ ಕೃತ್ಯ ದಲ್ಲಿ ಶಾಮೀಲಾಗಿ ರುವುದಾಗಿ ಪೊಲೀಸರಿಗೆ ಮಹತ್ವದ ಮಾಹಿತಿ ಲಭಿಸಿದ್ದು ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಹಣಕಾಸಿನ ವಹಿವಾಟು ಕೃತ್ಯಕ್ಕೆ ಕಾರಣ ಎನ್ನಲಾಗಿದೆ.
ಕೃತ್ಯದ ಹಿಂದೆ ನೂರ್ ಷಾ ಎಂಬಾತ ಕೈವಾಡವಿರುವ ಮಾಹಿತಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಕೊಲೆಗೀಡಾದ ಯುವಕನನ್ನು ಆಸ್ಪತ್ರೆಗೆ ತಲಪಿಸಿದ ಇಬ್ಬರು ಯುವಕರು ಹಾಗೂ ವಾಹನದ ದೃಶ್ಯ ಬಂದ್ಯೋಡಿನ ಖಾಸಗಿ ಆಸ್ಪತ್ರೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ಕೆಲವೊಂದು ಬೆಚ್ಚಿ ಬೀಳಿಸುವ ಅಂಶಗಳು ಪೊಲೀಸರಿಗೆ ಲಭಿಸಿದೆ. ಅಬೂಬಕ್ಕರ್ ಸಿದ್ದಿಕ್ ಆದಿತ್ಯವಾರ ಬೆಳಿಗ್ಗೆಯಷ್ಟೇ ಊರಿಗೆ ತಲಪಿದ್ದನು. ಊರಿಗೆ ತಲಪಿದ ಕೆಲ ಕ್ಷಣದಲ್ಲೇ ಈತನನ್ನು ಅಪಹರಿಸಲಾಗಿತ್ತು. ಈ ನಡುವೆ ಸಿದ್ದಿಕ್ ನ ಸಹೋದರ ಅನ್ವರ್ ಹಾಗೂ ಸಂಬಂಧಿಕ ಅನ್ಸಾರ್ ನನ್ನು ತಂಡವು ಎರಡು ದಿನಗಳ ಹಿಂದೆ ಅಪಹರಿಸಿ ದಿಗ್ಬಂಧನದಲ್ಲಿರಿಸಿತ್ತು. ಇವರ ಮೇಲೆ ಹಲ್ಲೆ ನಡೆಸಿದ್ದ ತಂಡವು ಸಿದ್ದಿಕ್ ಊರಿಗೆ ಬಂದಲ್ಲಿ ಮಾತ್ರ ಬಿಡುಗಡೆಗೊಳಿಸುವುದಾಗಿ ಬೇಡಿಕೆ ಇರಿಸಿತ್ತು. ಇದರಂತೆ ಸಿದ್ದಿಕ್ ಆದಿತ್ಯವಾರ ಮಂಗಳೂರು ವಿಮಾನ ನಿಲ್ದಾಣ ಮೂಲಕ ಊರಿಗೆ ತಲಪಿದ್ದನು . ಮಂಗಳೂರು ಮೂಲಕ ಊರಿಗೆ ಬರುವ ಮಧ್ಯೆ ಸಿದ್ದಿಕ್ ನನ್ನು ತಂಡವು ಅಪಹರಿಸಿತ್ತು ಎಂದು ಪೊಲೀಸರಿಗೆ ಮಾಹಿತಿ ಲಭಿಸಿದೆ. ಸಿದ್ದಿಕ್ ನನ್ನು ಅಪಹರಿಸಿದ್ದ ಬಳಿಕ ಅನ್ಸಾರ್ ಮತ್ತು ಅನ್ವರ್ ನನ್ನು ತಂಡವು ಬಿಡುಗಡೆ ಗೊಳಿಸಿತ್ತು. ಈ ಪೈಕಿ ಅನ್ವರ್ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ . ಸಿದ್ದಿಕ್ ನನ್ನು ತಂಡವು ಅಪಹರಿಸಿ ಪೈವಳಿಕೆ ಗೆ ಕರೆದುಕೊಂಡು ಬಂದಿದ್ದು , ಅಲ್ಲಿ ಸಿದ್ದಿಕ್ ನನ್ನು ಥಳಿಸಿದ್ದು , ರಾತ್ರಿ 9 ಗಂಟೆ ಸುಮಾರಿಗೆ ತಂಡವು ವಾಹನವೊಂದರಲ್ಲಿ ಸಿದ್ದಿಕ್ ನನ್ನು ಬಂದ್ಯೋಡಿನ ಆಸ್ಪತ್ರೆಗೆ ತಲುಪಿಸಿ ಕ್ಷಣಾರ್ಧದಲ್ಲೇ ತಂಡವು ಪರಾರಿಯಾಗಿದೆ.
ವೈದ್ಯರು ತಪಾಸಣೆ ನಡೆಸಿದಾಗ ಸಿದ್ದಿಕ್ ಮೃತಪಟ್ಟಿರುವುದು ದೃಢಪಟ್ಟಿತ್ತು. ಬಳಿಕ ಆಸ್ಪತ್ರೆ ಅಧಿಕಾರಿಗಳು ಕುಂಬಳೆ ಪೊಲೀಸರಿಗೆ ಮಾಹಿತಿ ನೀಡಿದ್ದರು.