ಉಡುಪಿ, ಜೂ 27 (DaijiworldNews/MS): ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದ್ದಒಟ್ಟು 19 ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 9 ಕೆ.ಜಿ 686 ಗ್ರಾಂ ಗಾಂಜಾ, 40 ಗ್ರಾಂ ಚರಸ್ ಒಟ್ಟು 3, 27,135 ರೂ. ಮೌಲ್ಯದ ಮಾದಕವಸ್ತುಗಳನ್ನು ಅನ್ನು ಪಡುಬಿದ್ರಿಯ ಆಯುಷ್ ಎನ್ವಿರೊಟೆಕ್ ಸಂಸ್ಥೆಯಲ್ಲಿ ಭಾನುವಾರ ನಾಶಪಡಿಸಲಾಯಿತು.
ಮಣಿಪಾಲ ಹಾಗೂ ಸೆನ್ ಠಾಣೆಯಲ್ಲಿ ದಾಖಲಾಗಿದ್ದ 4 ಪ್ರಕರಣ, ಕುಂದಾಪುರ ಹಾಗೂ ಕಾಪು ಠಾಣೆಯಲ್ಲಿ 3 ಹಾಗೂ ಕೋಟ ಹಾಗೂ ಗಂಗೊಳ್ಳಿ ಠಾಣೆಯಲ್ಲಿ ತಲಾ 2, ಮಲ್ಪೆ ಠಾಣೆಯಲ್ಲಿ ದಾಖಲಾಗಿದ್ದ ಒಂದು ಪ್ರಕರಣದಲ್ಲಿ ವಶಪಡಿಸಿಕೊಂಡಿದ್ದ ಮಾದಕವಸ್ತುಗಳನ್ನು ಜಿಲ್ಲಾ ಡ್ರಗ್ ವಿಲೇವಾರಿ ಸಮಿತಿಯ ಅಧ್ಯಕ್ಷರು ಹಾಗೂ ಪೊಲೀಸ್ ಅಧೀಕ್ಷಕರಾದ ಎನ್. ವಿಷ್ಣುವರ್ಧನ ಐ.ಪಿ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಟಿ. ಸಿದ್ದಲಿಂಗಪ್ಪ, ಸಮಿತಿಯ ಸದಸ್ಯರಾದ ಸುಧಾಕರ ಸದಾನಂದ ನಾಯ್ಕ, ಡಿವೈಎಸ್ಪಿ, ಉಡುಪಿ ಉಪವಿಭಾಗ ಹಾಗೂ ಎಸ್. ವಿಜಯ ಪ್ರಸಾದ್, ಡಿವೈಎಸ್ಪಿ, ಕಾರ್ಕಳ ಉಪವಿಭಾಗರವರ ಸಮ್ಮುಖದಲ್ಲಿ ನಾಶಗೊಳಿಸಲಾಯಿತು.
19 ಪ್ರಕರಣಗಳಲ್ಲಿ ನಾಲ್ಕು ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದ್ದು, ನಾಲ್ಕು ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊಂಡಿದ್ದಾರೆ. 1 ಪ್ರಕರಣದಲ್ಲಿ ಆರೋಪಿ ಮೃತನಾಗಿದ್ದಾನೆ. 8 ಪ್ರಕರಣಗಳು ವಿಚಾರಣೆಯ ಹಂತದಲ್ಲಿದ್ದು, 2 ಪ್ರಕರಣಗಳು ತನಿಖೆಯಲ್ಲಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸಂದರ್ಭ ಎಸ್ಪಿ ವಿಷ್ಣುವರ್ಧನ್ ಮಾತನಾಡಿ, ಪೊಲೀಸ್ ಅಧಿಕಾರಿಗಳ ಕಾರ್ಯಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಪೊಲೀಸ್ ವರಿಷ್ಟಾಧಿಕಾರಿಯವರು ಇನ್ನು ಮುಂದಕ್ಕೂ ಕೂಡಾ ಇಂತಹ ಪ್ರಕರಣಗಳನ್ನು ಹೆಚ್ಚು, ಹೆಚ್ಚು ಪತ್ತೆ ಹಚ್ಚಿ, ಉಡುಪಿ ಜಿಲ್ಲೆಯನ್ನು ಮಾದಕ ವ್ಯಸನಮುಕ್ತ ಜಿಲ್ಲೆಯನ್ನಾಗಿಸುವಲ್ಲಿ ಶ್ರಮಿಸಬೇಕೆಂದು ಕರೆ ನೀಡಿದರು.