ಕುಂದಾಪುರ, ಜೂ 26 (DaijiworldNews/HR): ಸೂರ್ಯನನ್ನು ವರ್ಣಿಸಲು ಹೇಗೆ ಅಸಾಧ್ಯವೋ, ಅದೇ ರೀತಿ ಎ.ಜಿ ಕೊಡ್ಗಿಯವರನ್ನು ವರ್ಣಿಸಲು ಅಸಾಧ್ಯ ಎಂದು ಆರ್.ಎಸ್.ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.
ಅಮಾಸೆಬೈಲಿನ ಸರಕಾರಿ ಪ್ರೌಢ ಶಾಲಾ ವಠಾರದಲ್ಲಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನ್ನಿಂದ ಸಮಾಜಕ್ಕೆ ಏನನ್ನು ಮಾಡಲು ಸಾಧ್ಯ ಎಂದು ಚಿಂತಿಸುತ್ತಾ, ನಾನು ಮಾತ್ರ ಸುಖವಾಗಿರದೇ ಗ್ರಾಮ ಪ್ರತಿಯೊಬ್ಬ ಪ್ರಜೆಯೂ ಸುಖದ ಜೀವನ ನಡೆಸಲು ಸಹಕಾರಿಯಾಗುವಂತಹ ಯೋಜನೆಗಳನ್ನು ರೂಪಿಸಿದ್ದರು. ಹೈನುಗಾರಿಕೆಯೊಂದಿಕೆ ಕೃಷಿಯನ್ನು ನಡೆಸುತ್ತಾ, ಅದಕ್ಕೆ ಆಧುನಿಕತೆಯ ಸ್ಪರ್ಶವನ್ನು ನೀಡಿ ಯಶಸ್ವಿ ಕೃಷಿಕರಾದರು. ಸ್ವದೇಶಿ ಚಿಂತನೆಯ ಜೊತೆಗೆ ರಾಷ್ಟ್ರೀಯ ಭಾವನೆಯನ್ನು ಉದ್ದೀಪನಗೊಳಿಸಲು ಹಲವಾರು ಯಶಸ್ವಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ ಎಂದರು.
ಇನ್ನು ಸತ್ಯ, ನ್ಯಾಯ, ಧರ್ಮವನ್ನು ಪಾಲಿಸುವವರು ನಿಷ್ಠುವಾದಿಗಳಾಗಿರುತ್ತಾರೆ. ಎ.ಜಿ ಕೊಡ್ಗಿಯವರು ಆ ಕಾರಣದಿಂದಲೇ ನಿಷ್ಠುರವಾದಿ ಎಂದು ಹೆಸರು ಪಡೆದಿದ್ದರು. ಅಧ್ಯಯನ ಮಾಡದೇ ಯಾವುದನ್ನು ಒಪ್ಪಿಕೊಳ್ಳದ ಅವರೊಳಗೆ ಒಬ್ಬ ಜ್ಞಾನಿ, ಅಧ್ಯಯಶೀಲ ವಿಜ್ಞಾನಿ ಇದ್ದ. ಬಿಜೆಪಿಯಲ್ಲಿ ಜಿಲ್ಲಾಧ್ಯಕ್ಷರಾದಗ ಮುಂದಿನ ಚುನಾವಣೆಯ ದೃಷ್ಟಿಕೋನವನ್ನು ಇಟ್ಟುಕೊಳ್ಳದೇ ಮೂಲದಲ್ಲಿ ಸಂಘಟನೆಯನ್ನು ಮಾಡಿ, ಸಂಘಟನೆಯ ಜೊತೆಗೆ ಪಕ್ಷವನ್ನು ಗಟ್ಟಿಗೊಳಿಸಿದವರು. ಆದರೆ ಕೊನೆಯ ದಿನಗಳಲ್ಲಿ ಪ್ರಸ್ತುತ ರಾಜಕೀಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.
ಭ್ರಷ್ಟಾಚಾರದ ವಿರುದ್ದ ಧ್ವನಿ ಎತ್ತಿದ ಅವರು ತನ್ನ ಸೊಸೈಟಿಗಳಲ್ಲಿ ಆರ್ಥಿಕ ವ್ಯವಸ್ಥೆಯಲ್ಲಿ ಲೋಪ ಆಗದಂತೆ ಯೋಜನೆ ರೂಪಿಸಿದರು. ಅಮಾಸೆಬೈಲು ಗ್ರಾಮಕ್ಕೆ ಬೆಳಕು ನೀಡಿದವರು ಎಂದು ತಿಳಿಸಿದರು
ಕರ್ನಾಟಕ ಬ್ಯಾಂಕಿನ ಮುಖ್ಯ ಆಡಳಿತ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ ಭಟ್ ಮಾತನಾಡಿ, 1984-92 ರವರೆಗೆ ಎ.ಜಿ ಕೊಡ್ಗಿಯವರು ಕರ್ಣಾಟಕ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರಾಗಿದ್ದರು. ಅಮಾಸೆಬೈಲು ಗ್ರಾಮವನ್ನು ಕರ್ಣಾಟಕ ಬ್ಯಾಂಕ್ ದತ್ತು ಪಡೆದು ಅಭಿವೃದ್ಧಿ ಪಡಿಸಲು ಕೊಡ್ಗಿಯವರು ರೂಪಿಸಿದ ಯೋಜನೆ ಅದ್ಬುತ. ಡಾ| ಡಿ ವೀರೆಂದ್ರ ಹೆಗ್ಡೆಯವರೊಂದಿಗೆ, ಎ.ಜಿ ಕೊಡ್ಗಿಯವರು ಚರ್ಚಿಸಿ ಅಮಾಸೆಬೈಲಿಗೆ ಸೋಲಾರ್ ನಿಂದ ಬೆಳಕು ಪಡೆಯುವ ಯೋಜನೆ ಅನುಷ್ಠಾನಗೊಳಿಸಿದರು. ಇದರಿಂದಾಗಿ ಅಮಾಸೆಬೈಲು ಗ್ರಾಮ ಭಾರತದಲ್ಲೇ ಪ್ರಥಮವಾಗಿ ಸೋಲಾರ್ ಗ್ರಾಮವಾಗಲು ಸಾಧ್ಯವಾಯಿತು ಎಂದರು.
ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಬೈಂದೂರು ಶಾಸಕ ಬಿ.ಎಮ್. ಸುಕುಮಾರ್ ಶೆಟ್ಟಿ, ಹಿಂ.ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷ ಎಮ್.ಎನ್ ರಾಜೇಂದ್ರ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಂಗಳೂರು ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ವೇದವ್ಯಾಸ್ ಕಾಮತ್, ಎ.ಜಿ ಕೊಡ್ಗಿಯವರ ಪುತ್ರರಾದ ಕಿರಣ್ ಕುಮಾರ್ ಕೊಡ್ಗಿ, ಕಿಶೋರ್ ಕುಮಾರ್ ಕೊಡ್ಗಿ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ, ಕುಂದಾಪುರ ಬಿಜೆಪಿ ಅಧ್ಯಕ್ಷ ಶಂಕರ ಅಂಕದಕಟ್ಟೆ, ಬಿಜೆಪಿ ಮುಖಂಡ ಸುರೇಶ್ ಶೆಟ್ಟಿ ಗುರ್ಮೆ ಸೇರಿದಂತೆ ಅನೇಕ ಗಣ್ಯರು ಹಾಗು ಊರಿನ ನಾಗರಿಕರು ಉಪಸ್ಥಿತರಿದ್ದರು.