ಉಡುಪಿ, ಜೂ 25 (DaijiworldNews/HR): ನ್ಯಾಯಾಲಯದ ಮೆಟ್ಟಿಲು ಹತ್ತಲಾಗದೇ ರಿಕ್ಷಾದಲ್ಲಿ ಕುಳಿತಿದ್ದ ಹಿರಿಯ ವೃದ್ದೆಯೊಬ್ಬರಿಗೆ ನ್ಯಾಯಾಧೀಶರೇ ರಿಕ್ಷಾದ ಬಳಿ ಬಂದು ಆಲಿಸಿದ ಘಟನೆ ಉಡುಪಿಯಲ್ಲಿ ಶನಿವಾರ ನಡೆದಿದೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೆಶನದ ಮೇರೆಗೆ ದಿನಾಂಕ 25ರಂದು ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತನ್ನು ಆಯೋಜಿಸಿತ್ತು. ಈ ಸಂಧರ್ಭದಲ್ಲಿ 2011 ರ ಅಸಲು ದಾವೆ ಪ್ರಕರಣದಲ್ಲಿ ಲೋಕ್ ಅದಾಲತ್ ನಲ್ಲಿ ಭಾಗಿಯಾಗಲು ಆಟೋ ರಿಕ್ಷಾದಲ್ಲಿ ಬಂದಂತಹ 81 ವರ್ಷದ ವೃದ್ಧೆ ದೇವಕಿ ಶೆಡ್ತಿ ತಮ್ಮ ಮಗಳಾದ ಜಯಂತಿಯವರಿಗೆ ಜಿ.ಪಿ.ಎ. ನೀಡಿದ್ದರು ಅವರು ನ್ಯಾಯಾಲಯದ ಮೆಟ್ಟಿಲುಗಳನ್ನು ಹತ್ತಲಾಗದೇ ಆಟೋದಲ್ಲಿ ಕುಳಿತ್ತಿದ್ದು ಆ ಸಂದರ್ಭದಲ್ಲಿ 4ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಜೀತು ಆರ್.ಎಸ್., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಶ್ರೀಮತಿ ಶರ್ಮಿಳಾ ಎಸ್. ಸಂಧಾನಕಾರರಾದ ನ್ಯಾಯವಾದಿ ಮಿತೇಶ್ ಶೆಟ್ಟಿ ಹಾಗೂ ಉಭಯಪಕ್ಷಗಾರರ ವಕೀಲರುಗಳು ದೇವಕಿ ಶೆಡ್ತಿರವರ ಬಳಿ ಬಂದು ಜಿ.ಪಿ.ಎ. ನೀಡಿದ್ದರ ಬಗ್ಗೆ ಪರಿಶೀಲಿಸಿ ತದನಂತರ ನ್ಯಾಯಾಲಯದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಮುಂಬೈನಲ್ಲಿದ್ದ ನಾಲ್ಕು ಜನ ಪಕ್ಷಗಾರರು ಭಾಗಿಯಾದ ನಂತರ ಪ್ರಕರಣವನ್ನು ಇತ್ಯರ್ಥಪಡಿಸಲಾಯಿತು.
ವಿಶೇಷ ಎಂಬಂತೆ 2ನೇ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ಹಾಗೂ 4ನೇ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ಮುಂದಿದ್ದ ಎರಡೂ ದಾವೆಗಳಲ್ಲಿ ಅತ್ತೆ ಮತ್ತು ಸೊಸೆ ಹಾಗೂ ಇತರರು ಭಾಗಿಯಾಗಿ ವ್ಯಾಜ್ಯ ಇತ್ಯರ್ಥಪಡಿಸಿಕೊಂಡಿದ್ದು ಈ ಅದಾಲತ್ ನ ವಿಶೇಷ. ಒಂದೇ ದಿನ ಒಟ್ಟು 30,773 ಪ್ರಕರಣಗಳನ್ನು ರಾಜೀ ಮುಖಾಂತರ ಇತ್ಯರ್ಥಪಡಿಸಿ ರೂ.20,50,13,358/- ಪರಿಹಾರದ ಮೊತ್ತವನ್ನು ಘೋಷಿಸಲಾಯಿತು.
ಪ್ರಧಾನ ನ್ಯಾಯಾಧೀಶರು, ಕೌಟುಂಬಿಕ ನ್ಯಾಯಾಲಯದಲ್ಲಿ ಮೂರು ವರ್ಷಗಳ ಹಿಂದ ವೈಮನಸ್ಸಿನಿಂದ ದೂರವಾಗಿದ್ದ 4 ದಂಪತಿಗಳ ಸಮ್ಮಿಲನ.
ಕಾರ್ಕಳದ ನ್ಯಾಯಾಲದಲ್ಲಿ 98 ಜನ ಪ್ರತಿವಾದಿಗಳ ಹಾಗೂ ಇಬ್ಬರು ವಾದಿಗಳಿದ್ದ ಅಸಲು ದಾವೆಯಲ್ಲಿ ಉಭಯಪಕ್ಷಗಾರರು ಪಾಲು ದಾವೆಯನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಂಡಿದ್ದಾರೆ.ಪ್ರದಾನ ಹಿರಿಯ ಸಿವಿಲ್ ನ್ಯಾಯಾಧೀಶರು ನ್ಯಾಯಾಲಯದಲ್ಲಿ 2014 ರಲ್ಲಿ ಅಣ್ಣ ಮತ್ತು ತಂಗಿಯ ನಡುವೆ ದಾಖಲಾದ ಪಾಲು ವಿಭಾಗದ ದಾವೆ ರಾಜೀ ಸಂಧಾನದ ಮೂಲಕ ಇತ್ಯರ್ಥವಾಗಿರುತ್ತದೆ. ಅದೇ ರೀತಿ 2004 ರಲ್ಲಿ ದಾಖಲಾದ ಅಸಲು ದಾವೆ ಪ್ರಕರಣ ಅಫಿಲು ಸಂಖ್ಯೆ 48/2018 ರಲ್ಲಿ ಉಭಯಪಕ್ಷಗಾರರು ನಡುವೆ ಸೌಹಾರ್ದಯುತವಾಗಿ ಇತ್ಯರ್ಥವಾಗಿರುತ್ತದೆ.
ಇನ್ನು ಕುಂದಾಪುರದಲ್ಲಿ 31 ವರ್ಷಗಳ ಹಿಂದೆ ಶುರುವಾದ ವೈಮನಸ್ಸು ಈ ಬಾರಿಯ ಲೋಕ ಅದಾಲತ್ ನಲ್ಲಿ ನ್ಯಾಯಾಧೀಶರು ವಕೀಲರು ಹಾಗೂ ಸಂಧಾನಕಾರರ ಮಧ್ಯಸ್ಥಿಕೆಯಿಂದ ಎಫ್.ಡಿ.ಪಿ. 11/2008 ರ ಹಳೆಯ ಪ್ರಕರಣದಲ್ಲಿ ಪಕ್ಷಗಾರರ ನಡುವೆ ರಾಜೀ ಸಂಧಾನದ ಮೂಲಕ ಇತ್ಯರ್ಥವಾಗಿರುತ್ತದೆ.