ಉಳ್ಳಾಲ, ಜೂ 25 (DaijiworldNews/HR): ಉಚ್ಚಿಲ ಸೋಮೇಶ್ವರ ಸಮುದ್ರ ತೀರದಲ್ಲಿ ಮುಳುಗಡೆಯಾಗಿರುವ ತೈಲ ಹೊತ್ತಿರುವ ಸಿರಿಯಾ ಹಡಗಿನಿಂದ ತೈಲ ಸೋರಿಕೆಯಾದಲ್ಲಿ ಅಥವಾ ಸೋರಿಕೆಯಾಗದಂತೆ ತಡೆಗಟ್ಟುವ ಉದ್ದೇಶದಿಂದ ಜಿಲ್ಲಾಡಳಿತ ನಿದರ್ಶನದಲ್ಲಿ ರಕ್ಷಣಾ ತಂಡಗಳ ನೇತೃತ್ವದಲ್ಲಿ ಉಳ್ಳಾಲ ಸಮುದ್ರ ತೀರದಲ್ಲಿ ಅಣುಕು ರಕ್ಷಣಾ ಕಾರ್ಯಾಚರಣೆ ಹಾಗೂ 160 ಮಂದಿ ಸಿಬ್ಬಂದಿಗೆ ತರಬೇತಿ ನಡೆಯಿತು.
ಅಣುಕು ಕಾರ್ಯಾಚರಣೆ ಪ್ರದೇಶಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಮಾತನಾಡಿ, ಜಿಲ್ಲೆಯ ವ್ಯಾಪ್ತಿಯ ಸಮುದ್ರ ತೀರದಲ್ಲಿ ತೈಲ ಹೊತ್ತಿರುವ ಸಿರಿಯಾ ಹಡಗು ಮುಳುಗಡೆ ಹಿನ್ನೆಲೆಯಲ್ಲಿ ರಕ್ಷಣಾ ತಂಡಗಳಿಂದ ಅಣುಕು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ. ಹಡಗಿನೊಳಗಡೆ 160 ಮೆಟ್ರಿಕ್ ಟನ್ ತೈಲ ದಾಸ್ತಾನು ಹಾಗೂ 60 ಮೆಟ್ರಿಕ್ ಟನ್ ಹಡಗಿನ ಇಂಜಿನ್ ಆಯಿಲ್ ಇದೆ. ಈ ಕುರಿತು ಡಿ.ಜೆ ಶಿಪ್ಪಿಂಗ್, ಹಡಗು ಮಾಲೀಕರು ಹಾಗೂ ಪ್ರಾಡಕ್ಷನ್ ಆಂಡ್ ಎಂಡೆಮೆಟಿಕ್ ಕ್ಲಬ್ ಮುಖಾಂತರ ತೈಲ ಸೋರಿಕೆಯಾಗದ ರೀತಿಯಲ್ಲಿ, ಸುಗಮವಾಗಿ ಹೊರತೆಗೆಯುವ ಕುರಿತು ಯೋಜನೆ ರೂಪಿಸಲಾಗುತ್ತಿದೆ. ಇವರ ಜೊತೆಗೆ ಕೋಸ್ಟ್ ಗಾರ್ಡ್, ಕರ್ನಾಟಕ ಸರಕಾರ , ಜಿಲ್ಲಾಡಳಿತ ಸೇರಿದಂತೆ ಇಡೀ ರಕ್ಷಣಾ ತಂಡ ಸಹಕರಿಸುತ್ತಿದೆ. ಹಡಗು ತುಂಡಾಗಿ ತೈಲ ಸೋರಿಕೆಯಾದಲ್ಲಿ ಆಯಿಲ್ ಸ್ಪಿಲ್ ಕ್ರೈಸಿಸ್ ತಂಡ, ತಾಂತ್ರಿಕ ತಜ್ಞರ ಮುಖೇನ ಸಲಹೆ ಪಡೆದು 140 ಮಂದಿಗೆ ತರಬೇತಿಯನ್ನು ನೀಡಲಾಗಿದೆ. ತೈಲ ಸೋರಿಕೆಯಾದರೂ ಪರಿಸರ ನಾಶವಾಗದ ರೀತಿಯಲ್ಲಿ ಹಾಗೂ ಸೋರಿಕೆಯಾದ ಸಂದರ್ಭ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಇಂದಿನ ತರಬೇತಿಯಲ್ಲಿ ಮಾಡಲಾಗಿದೆ. ಹಡಗಿನೊಳಗಡೆ ಇದ್ದಂತಹ 15 ಸಿರಿಯನ್ ಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಹಡಗಿನೊಳಗಡೆ ಇರುವಂತಹ ತೈಲವನ್ನು ಸುರಕ್ಷಿತವಾಗಿ ಹೊರತೆಗೆದ ನಂತರ ಮುಳುಗಡೆಯ ತನಿಖೆ ನಡೆಯಲಿದೆ ಎಂದರು.
ಈ ಸಂದರ್ಭ ಎನ್ ಡಿಆರ್ ಎಫ್ಎಸ್ಡಿಆರ್ಎಫ್, ಹೋಂ ಗಾರ್ಡ್, ಕಾರವಳಿ ತಟ ರಕ್ಷಣಾ ಪಡೆ, ಕರಾವಳಿ ಕಾವಲು ಪಡೆ, ಉಳ್ಳಾಲ ಪೊಲೀಸ್ ತಂಡ ಅಣುಕು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ , ಉಳ್ಳಾಲ ನಗರಸಭೆ ಕಮೀಷನರ್ ವಿದ್ಯಾ ಕಾಳೆ ಸೇರಿದಂತೆ ರಕ್ಷಣಾ ತಂಡಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.