ಕಾಸರಗೋಡು, ಜೂ 25 (DaijiworldNews/HR): ಯುವಕನೋರ್ವನ ಮೃತದೇಹ ಕೆರೆಯಲ್ಲಿ ಪತ್ತೆಯಾದ ಘಟನೆ ಶುಕ್ರವಾರ ರಾತ್ರಿ ಪೆರ್ಲ ಇಡಿಯಡ್ಕ ಸಮೀಪದ ಕುದ್ವ ಎಂಬಲ್ಲಿ ನಡೆದಿದೆ.
ಮೃತ ಯುವಕನನ್ನು ಬಣ್ಪುತ್ತಡ್ಕದ ಉಮೇಶ್ (35) ಎಂದು ಗುರುತಿಸಲಾಗಿದೆ.
ಮೂಲತಃ ನಿಡ್ಪಳ್ಳಿ ನಿವಾಸಿಯಾದ ಉಮೇಶ್ ಬಣ್ಪುತ್ತಡ್ಕದಿಂದ ವಿವಾಹವಾಗಿದ್ದು ಬಳಿಕ ಕಳೆದ ಕೆಲವು ವರ್ಷಗಳಿಂದ ಇಲ್ಲಿಯೇ ನೆಲೆಸಿದ್ದರು. ಬಣ್ಪುತ್ತಡ್ಕದಲ್ಲಿ ನೂತನ ಮನೆಯೊಂದನ್ನು ನಿರ್ಮಿಸಿ ದ್ದು, ತಿಂಗಳ ಹಿಂದೆ ಗೃಹ ಪ್ರವೇಶ ನಡೆದಿತ್ತು.
ಶೇಂದಿ ಸಂಗ್ರಹ ಕಾಯಕ ಮಾಡುತ್ತಿದ್ದ ಈತ ಈ ಪರಿಸರದ ಹಲವು ತೆಂಗಿನ ಮರವೇರಿ ಶೇಂದಿ ಸಂಗ್ರಹಿಸುತ್ತಿದ್ದು ಇದಕ್ಕಾಗಿ ತೋಟಕ್ಕೆ ಬಂದಿದ್ದು ಕೈಕಾಲು ಮುಖ ತೊಳೆಯಲು ಕೆರೆಯ ಬಳಿ ಬಂದಾಗ ಆಯ ತಪ್ಪಿ ಬಿದ್ದಿರಬೇಕೆಂದು ಸ್ಥಳೀಯರು ಸಂಶಯಿಸಿದ್ದಾರೆ.
ಬದಿಯಡ್ಕ ಠಾಣಾ ಪೋಲಿಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಮೃತದೇಹ ಮೇಲಕ್ಕೆತ್ತಿದ್ದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.
ಉಮೇಶ್ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದರು. ಮೃತರು ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಳಗವನ್ನು ಅಗಲಿದ್ದಾರೆ.