ಬಂಟ್ವಾಳ, ಜ 17(MSP): ಫರಂಗಿಪೇಟೆಯಲ್ಲಿ ಹಲವು ವರ್ಷಗಳಿಂದ ಬೀದಿಬದಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ಮೀನು ಮಾರುಕಟ್ಟೆಯನ್ನು ರೈಲ್ವೇ ಇಲಾಖೆ ಇಂದು ತೆರವುಗೊಳಿಸಿದೆ. ಆದರೆ ತೆರವಿನ ಬಳಿಕ ರೈಲ್ವೆ ಇಲಾಖೆ ಮತ್ತು ಸ್ಥಳೀಯರ ನಡುವೆ ಮತ್ತೆ ವಿವಾದ ಉಂಟಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಒಂದು ತಿಂಗಳ ಹಿಂದೆ ಮೀನು ಮಾರುಕಟ್ಟೆ ವ್ಯಾಪಾರಿಗಳು ರೈಲ್ವೆ ಇಲಾಖೆಯ ಜಾಗ ಅತಿಕ್ರಮಣ ಮಾಡಿದ್ದಾರೆಂದು ವ್ಯಾಪಾರಿಗಳ ಹಾಗೂ ಇಲಾಖೆಯ ಮದ್ಯೆ ವಾಗ್ವದ ಉಂಟಾಗಿತ್ತು. ಆದರೆ ಇಂದು ಮೀನು ಮಾರುಕಟ್ಟೆ ಯನ್ನು ಅಲ್ಲಿಂದ ಸ್ಥಳಾಂತರ ಮಾಡಿದ ಬಳಿಕ ಇಲಾಖೆಯ ಜಾಗಕ್ಕೆ ಗಡಿ ಗುರುತು ಮಾಡಿ ಬೇಲಿ ಹಾಕುವ ವಿಚಾರದಲ್ಲಿ ರೈಲ್ವೆ ಇಲಾಖೆ ಹಾಗೂ ಸ್ಥಳೀಯರ ನಡುವೆ ಮತ್ತೆ ಮಾತಿನ ಚಕಮಕಿ ನಡೆಯಿತು.ಇಲಾಖೆ ತನ್ನ ಜಾಗದ ಸರ್ವೇ ನಡೆಸಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಸುಮಾರು 3 ಅಡಿ ಜಾಗ ಬಿಟ್ಟು ಜೆಸಿಬಿ ಮೂಲಕ ಗುಂಡಿತೋಡಿ ಬೇಲಿ ಹಾಕುವ ಕಾರ್ಯಕ್ಕೆ ಮುಂದಾಗಿತ್ತು. ಹೆದ್ದಾರಿಯ ಪಕ್ಕದಲ್ಲೇ ತಡೆಬೇಲಿ ಹಾಕಿದರೆ ಪಾದಚಾರಿಗಳಿಗೆ, ವಾಹನ ಪಾರ್ಕಿಂಗೆಗೆ ತೊಂದರೆಯಾಗುತ್ತದೆ ಎಂದು ಆರೋಪಿಸಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ರೈಲ್ವೆ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳುವವರೆಗೂ ಕಾಮಗಾರಿಯನ್ನು ನಡೆಸದಂತೆ ಪಟ್ಟು ಹಿಡಿದಿದ್ದಾರೆ.
ಇದರಿಂದ ಸ್ಥಳದಲ್ಲಿ ಕೆಲ ಹೊತ್ತು ಗೊಂದಲದ ವಾತಾವರಣ ಉಂಟಾಗಿದ್ದು, ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ಸೈ ಪ್ರಸನ್ನ ನೇತೃತ್ವದಲ್ಲಿ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ.