ಬಂಟ್ವಾಳ, ಜೂ 25 (DaijiworldNews/HR): ನೂರಾರು ವರ್ಷಗಳ ಇತಿಹಾಸವಿದ್ದ ಬೃಹತ್ ಗಾತ್ರದ ಅಶ್ವಥ ಮರವೊಂದು ಉರುಳಿ ಬಿದ್ದು ಕಾರು ಜಖಂಗೊಂಡು, ಕಾರಿನಲ್ಲಿದ್ದ ವ್ಯಕ್ತಿಯೋರ್ವನಿಗೆ ಗಾಯವಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾನೆ.
ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಸಜೀಪನಡು ಗ್ರಾಮದ ಲಕ್ಷಣ ಕಟ್ಟೆ ಎಂಬಲ್ಲಿ ಸುಮಾರು 600 ವರ್ಷ ಗಳ ಇತಿಹಾಸವಿದ್ದ ಅಶ್ವಥ ಮರವೊಂದು ಉರುಳಿಬಿದ್ದು ಕಾರು ಜಖಂಗೊಂಡಿದೆ.
ಕಾರಿನಲ್ಲಿದ್ದ ಲುಕ್ಮಾನ್ ಎಂಬಾತನಿಗೆ ಗಾಯವಾಗಿದ್ದು, ಯಾವುದೇ ಪ್ರಾಣಾಪಾಯವಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಲುಕ್ಮಾನ್ ಅವರ ಜೊತೆಯಲ್ಲಿ ಇಬ್ಬರು ಸಂಬಂಧಿಕ ಮಹಿಳೆಯರು ಪೇಟೆಗೆ ಹೋಗಿ ವಾಪಾಸು ಮನೆಗೆ ಬರುವ ವೇಳೆ ಈ ಘಟನೆ ನಡೆದಿದೆ.
ಕಾರು ನಿಲ್ಲಿಸಿ ಮಹಿಳೆಯರಿಬ್ಬರು ಕಾರಿನಿಂದ ಇಳಿದು ಹೋಗುತ್ತಿದ್ದಂತೆ ಮರ ಉರುಳಿ ಬಿದ್ದಿದ್ದು, ಕಾರಿನೊಳಗಿದ್ದ ಮಾಲಕ ಲುಕ್ಮಾನ್ ಇಳಿಯಬೇಕು ಎನ್ನುವಷ್ಟರಲ್ಲಿ ಘಟನೆ ಸಂಭವಿಸಿದ್ದರಿಂದ ಸಣ್ಣಪುಟ್ಟ ಗಾಯವಾಗಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಅಪರಾಧ ವಿಭಾಗದ ಎಸ್.ಐ.ಸಂಜೀವ, ಸಿಬ್ಬಂದಿ ಗಳಾದ ಸುರೇಶ್, ಪುನೀತ್ , ಮಾಂತೇಶ್ ಅವರು ಬೇಟಿ ನೀಡಿ ಸ್ಥಳೀಯ ರ ಸಹಕಾರ ದೊಂದಿಗೆ ಮರವನ್ನು ತೆರವುಗೊಳಿಸುವ ಕಾರ್ಯಮಾಡಿದ್ದಾರೆ.