ಬೆಂಗಳೂರು, ಜ 17(MSP): ಲೋಕಸಭಾ ಚುನಾವಣೆಗೆ ಸಜ್ಜಾಗಲು, ಅದಕ್ಕಾಗಿ ಕಾರ್ಯತಂತ್ರ ಸಿದ್ದಪಡಿಸಲು ನಮ್ಮೆಲ್ಲಾ ಶಾಸಕರೂ ಒಟ್ಟಿಗೆ ಸೇರಿದ್ದೇವು- ಈ ಸಭೆಗಾಗಿ ನಾವೆಲ್ಲ ಒಟ್ಟಿಗೆ ಸೇರಿದ್ದಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರೂ ಯಾಕೆ ಟೆನ್ಶನ್ ಮಾಡಿಕೊಂಡಿದ್ದಾರೆ ಎಂದು ನನಗೆ ಯಾಕೋ ಅರ್ಥವಾಗದ ವಿಚಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ನಾವು ಆಪರೇಷನ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಜೆಡಿಎಸ್-ಕಾಂಗ್ರೆಸ್ ಅವರೇ ನಮಗೆ 'ಆಪರೇಷನ್' ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ನಮಗೆ ಶಾಸಕರನ್ನು ಸೆಳೆಯುವ ಅಗತ್ಯವಿಲ್ಲ, ಕುದುರೆ ವ್ಯಾಪಾರದಲ್ಲಿ ಸ್ವತಃ ರಾಜ್ಯದ ಮುಖ್ಯಮಂತ್ರಿಗಳೇ ತೊಡಗಿಸಿಕೊಂಡಿದ್ದಾರೆ. ಅವರೇ ನಮ್ಮ ಶಾಸಕರಿಗೆ ಹಣ ಹಾಗೂ ಮಂತ್ರಿ ಸ್ಥಾನದ ಆಸೆ ತೋರಿಸಿ ತಮ್ಮತ್ತ ಸೆಳೆಯಲು 'ಆಪರೇಷನ್’ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಮ್ಮತ್ತ ಬೆರಳು ತೋರುವ ಮೊದಲು ಅವರ ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ, ಅವರ ಶಾಸಕರು ಅಸಮಾಧಾನಗೊಂಡರೆ ಅವರನ್ನು ಒಗ್ಗೂಡಿಸುವುದು ನನ್ನ ಜವಾಬ್ದಾರಿಯಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.