ಮಂಗಳೂರು,ಜ 17(MSP): ’ಸಂಸದರಾಗಿಯೂ ಅನಕ್ಷರಸ್ಥರಂತೆ ವರ್ತಿಸಬಾರದು’ ಎಂದು, ಸಂಸದ ನಳಿನ್ ಕುಮಾರ್ ಕಟೀಲ್ ಅವರ ವಿರುದ್ದ ಸಂಸದೀಯ ಆರ್ಥಿಕ ಸ್ಥಾಯೀ ಸಮಿತಿ ಅಧ್ಯಕ್ಷ ವೀರಪ್ಪ ಮೊಯ್ಲಿ ಅವರು ಹೇಳಿದ್ದಾರೆ. ವಿಜಯ ಬ್ಯಾಂಕ್ ವಿಚಾರವಾಗಿ ವೀರಪ್ಪ ಮೊಯ್ಲಿ ಅವರು ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಪತ್ರ ಬರೆದಿದ್ದು, ಇದರಲ್ಲಿ ನಿಮ್ಮ ಹೇಳಿಕೆ ಸತ್ಯಕ್ಕೆ ದೂರವಾದ ವಿಚಾರ ಎಂದು ಉಲ್ಲೇಖಿಸಿದ್ದಾರೆ.
"ವಿಜಯ ಬ್ಯಾಂಕನ್ನು ಉಳಿದ ಬ್ಯಾಂಕುಗಳೊಂದಿಗೆ ವಿಲೀನಗೊಳಿ ಸಲು ಪಾರ್ಲಿಮೆಂಟಿನ ಹಣಕಾಸು ಸ್ಥಾಯೀ ಸಮಿತಿ ಮೂಲಕ ನಾನು ಶಿಫಾರಸು ಮಾಡಿದ್ದೇನೆ. ಎಂಬ ಹೇಳಿಕೆ ಸತ್ಯಕ್ಕೆ ದೂರವಾದ ವಿಚಾರ' ಸತ್ಯವನ್ನು ತಿಳಿಯದೇ ಈ ರೀತಿ ಅಪಪ್ರಚಾರ ಮಾಡಿರುತ್ತೀರಿ. ತಾವು ಈ ರೀತಿ ಅಪಪ್ರಚಾರ ಮಾಡಿ ನಿಮಗೆ ನೀವೆ ಕಳಂಕ ತಂದಿರುತ್ತೀರಿ.
"ನಾನು ಅಧ್ಯಕ್ಷನಾಗಿರುವ ಹಣಕಾಸಿನ ಸಮಿತಿ ವಿಜಯ ಬ್ಯಾಂಕನ್ನು ಯಾವುದೇ ಬ್ಯಾಂಕಿನೊಂದಿಗೆ ಒಗ್ಗೂಡಿಸುವಂತೆ ಶಿಫಾರಸು ಮಾಡಿಲ್ಲ. ಅಪಪ್ರಚಾರ ಮಾಡುವುದು ನಿಮ್ಮ ಪಾರ್ಲಿಮೆಂಟ್ ಸದಸ್ಯತ್ವಕ್ಕೆ ಸೂಕ್ತವಲ್ಲ' ಎಂದು ನಳಿನ್ ಕುಮಾರ್ ಕಟೀಲು ಅವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
"ಈ ಬಗ್ಗೆ ತಾವು ಕ್ಷಮೆ ಯಾಚಿಸಬೇಕು. ಪಾರ್ಲಿಮೆಂಟ್ ಸದಸ್ಯರಾಗಿ ಯಾವ ವರದಿ ಯನ್ನೂ ಓದದೆ ಅನಕ್ಷರಸ್ಥರಂತೆ ಈ ರೀತಿ ಅಪ ಪ್ರಚಾರಕ್ಕೆ ಇಳಿಯುವುದು ಸೂಕ್ತವಲ್ಲ' ಎಂದು ಡಾ| ಮೊಯ್ಲಿ ತಿಳಿಸಿದ್ದಾರೆ.