ಸುಳ್ಯ, ಜೂ 25 (DaijiworldNews/DB): ಸುಳ್ಯ ತಾಲೂಕಿನ ಹಲವೆಡೆ ಇಂದು ಬೆಳಗ್ಗಿನ ವೇಳೆ ಲಘು ಭೂಕಂಪನದ ಅನುಭವವಾಗಿದ್ದು, ಸುಮಾರು 45 ಸೆಕೆಂಡ್ಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ.
ಸುಳ್ಯ, ಮರ್ಕಂಜ, ಕಲ್ಲುಗುಂಡಿ, ಸಂಪಾಜೆ, ಪೆರಾಜೆ, ಅರಂತೋಡು, ಐವರ್ನಾಡು, ತೊಡಿಕಾನ, ಗೂನಡ್ಕ ಸೇರಿದಂತೆ ತಾಲೂಕಿನ ವಿವಿಧೆಡೆ ಬೆಳಗ್ಗೆ ಸುಮಾರು 9.10ರ ಸಮಯದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನ ಆತಂಕದಿಂದ ಮನೆಯಿಂದ ಹೊರಗೋಡಿ ಬಂದಿದ್ದಾರೆ. ಮನೆಯಲ್ಲಿದ್ದ ಪಾತ್ರೆ, ಚಯರ್ ಮುಂತಾದವುಗಳು ಅಲುಗಾಡಿದ್ದು, , ಕಪಾಟಿನಲ್ಲಿಟ್ಟಿದ್ದ ಪಾತ್ರೆ ಮತ್ತಿತರ ವಸ್ತುಗಳು ಕೆಳಗೆ ಬಿದ್ದಿದೆ.
ಕೆಲವು ಮನೆಗಳ ಗೋಡೆಗಳು ಸಹ ಬಿರುಕುಬಿಟ್ಟಿದ್ದು, ಮನೆಯ ಮೇಲ್ಭಾಗಕ್ಕೆ ಹಾಕಲಾದ ಡಬ್ಬಿ, ಶೀಟ್ಗಳು ಕೂಡಾ ಅಲುಗಾಡಿವೆ. ಬೆಳಗ್ಗಿನ ಕೆಲಸದಲ್ಲಿ ತಲ್ಲೀನರಾಗಿದ್ದವರಿಗೆ ಕೆಲಸ ಮಾಡುತ್ತಿದ್ದಾಗಲೇ ಕೈಲಿದ್ದ ವಸ್ತುಗಳು ಅಲುಗಾಡಿದಂತ ಅನುಭವ ಉಂಟಾಗಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ, ಸುಳ್ಯ, ಅರಂತೋಡು ಭಾಗಗಳಿಂದ ಹಲವಾರು ಜನರು ಕರೆ ಮಾಡಿ ಭೂಮಿ ಕಂಪಿಸಿದ ಅನುಭವವನ್ನು ಹೇಳಿಕೊಂಡಿದ್ದಾರೆ. ಈ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಘಟಕದ ಮಾಹಿತಿಗಾಗಿ ಕಾಯಲಾಗುತ್ತಿದೆ ಎಂದು ತಿಳಿಸಿದ್ದಾರೆ.