ಮಂಗಳೂರು, ಜೂ 24 (DaijiworldNews/SM): ನಗರದಲ್ಲಿ ರಾಜ್ಯ ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಮಾಜಿ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಮಂಗಳೂರಿನಲ್ಲಿ ಶಾಸಕ ವೇದವ್ಯಾಸ್ ಕಾಮತ್ ಉಪಸ್ಥಿತಿಯ ಹಾಗೂ ಮಂಗಳೂರು ವಿವಿ ಕುಲಪತಿ ಅಧ್ಯಕ್ಷರಾಗಿದ್ದ ಕಾರ್ಯಕ್ರಮದಲ್ಲಿ ರೋಹಿತ್ ಚಕ್ರತೀರ್ಥ ಅವರನ್ನು ಸನ್ಮಾನಿಸಲು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸನ್ಮಾನ ಕಾರ್ಯಕ್ರಮಕ್ಕೆ ಬಿಲ್ಲವ ಮುಖಂಡರು, ಡಿವೈಎಫ್ ಐ ಹಾಗೂ ಇನ್ನಿತರ ಸಂಘಟನೆಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಆಯೋಜಕರು ಒಂದು ಪೋಸ್ಟರ್ ಮೂಲಕ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ. ಪೋಸ್ಟರ್ ನಲ್ಲಿ ಕೆಲವು ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ‘ ಶ್ರೀ ರೋಹಿತ್ ಚಕ್ರತೀರ್ಥ ಅವರಿಗೆ ನಾಗರಿಕ ಸನ್ಮಾನ ಎಂದ ಕೂಡಲೇ ಎಡಪಂಥಿಯರು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಮುತ್ತಿಗೆ ಹಾಕಿ, ಗಲಾಟೆ, ದೊಂಬಿ ನಡೆಸಿ ನಗರದ ಶಾಂತಿ ಸುವ್ಯವಸ್ಥೆ ಹಾಳು ಮಾಡುವ ಸಾಧ್ಯತೆ ಇದೆ ಎಂದು ಮಾಹಿತಿ ಬಂದ ಹಿನ್ನೆಲೆ ಜೂನ್ 25 ರ ನಾಗರಿಕ ಸನ್ಮಾನ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಸತ್ಯ ಕೆಲವು ದಿನ ಹಿಮ್ಮೆಟ್ಟಬಹುದು ಆದರೆ ಸಾಯುವುದಿಲ್ಲ ಎಂದು ನೆನಪಿರಲಿ’ ಎಂದು ತಿಳಿಸಲಾಗಿದೆ.