ಮಂಗಳೂರು, ಜೂ 24 (DaijiworldNews/SM): ಡೊಂಗರಕೇರಿ ಹೈಸ್ಕೂಲ್ ನಲ್ಲಿ ಆಯೋಜಿಸಿರುವ ಚಿಂತನ ಗಂಗಾ ರೋಹಿತ್ ಚಕ್ರತೀರ್ಥ ಅವರಿಗೆ ನಾಗರಿಕರ ಸನ್ಮಾನ ಕಾರ್ಯಕ್ರಮಕ್ಕೆ ಬಿಲ್ಲವ ಸಮಾಜ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಈ ಬಗ್ಗೆ ಗರೋಡಿಯಲ್ಲಿ ಸಭೆ ನಡೆಸಿರುವ ಬಿಲ್ಲವ ಸಂಘಟನೆ ಮುಖಂಡರು ಒಮ್ಮತದ ನಿರ್ಧಾರಕ್ಕೆ ಬಂದಿದ್ದು ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ.
ನಾಳೆ ಮಂಗಳೂರಿಗೆ ರೋಹಿತ್ ಚಕ್ರತೀರ್ಥ ಆಗಮಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿವಿ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ವಹಿಸಲಿದ್ದು, ಇದಕ್ಕೂ ಸಂಘಟನೆ ಅಸಮಾಧಾನ ಹೊರಹಾಕಿದೆ. ಇನ್ನು ನಾಳೆ ನವಭಾರತ್ ಸರ್ಕಲ್ನಲ್ಲಿ ಕಪ್ಪು ಬಟ್ಟೆ ಹಳದಿ ಶಾಲು ಧರಿಸಿ ಪ್ರತಿಭಟನೆ ನಡೆಸುವ ನಿರ್ಧಾರಕ್ಕೆ ಬಿಲ್ಲವ ಸಂಘಟನೆ ಸಿದ್ಧತೆ ನಡೆಸಿಕೊಂಡಿದೆ.
10ನೆಯ ತರಗತಿ ಸಮಾಜ ಪಾಠದಲ್ಲಿ ನಾರಾಯಣಗುರು ಪಠ್ಯ ಕೈ ಬಿಟ್ಟ ಹಿನ್ನಲೆಯಲ್ಲಿ ರೋಹಿತ್ ಚಕ್ರತೀರ್ಥ ಆಗಮನ ಸಂದರ್ಭ ಪ್ರತಿಭಟನೆಗೆ ಬಿಲ್ಲವ ಸಂಘಟನೆ ನಿರ್ಧಾರ ಕೈಗೊಂಡಿದೆ. ಹಾಗೂ ಮತ್ತೆ ಪಠ್ಯದಲ್ಲಿ ಶ್ರೀ ನಾರಾಯಣ ಗುರುಗಳ ಪಠ್ಯ ಸೇರಿಸುವಂತೆ ಒತ್ತಾಯಿಸುತ್ತಿದ್ದಾರೆ.