ಕಾಸರಗೋಡು, ಜೂ 24 (DaijiworldNews/DB): ಉಡುಪಿ-ಕರಿಂದಳ-ವಯನಾಡು ಪವರ್ ಹೈವೇ ಕಾರ್ಯಗತಗೊಳ್ಳುವುದರೊಂದಿಗೆ ಕಾಸರಗೋಡು ಜಿಲ್ಲೆಯ ವಿದ್ಯುತ್ ಕೊರತೆಗೆ ಶಾಶ್ವತ ಪರಿಹಾರ ಲಭಿಸಲಿದೆ ಎಂದು ಕೇರಳ ವಿದ್ಯುತ್ ಸಚಿವ ಕೆ . ಕೃಷ್ಣನ್ ಕುಟ್ಟಿ ಹೇಳಿದ್ದಾರೆ.
ಅವರು ಶುಕ್ರವಾರ ಕಾಸರಗೋಡು ವಿದ್ಯುತ್ ಭವನ ಹಾಗೂ ಮುಳ್ಳೇರಿಯ ವಿದ್ಯುತ್ ವಿಭಾಗೀಯ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.
750 ಕೋಟಿ ರೂ. ವೆಚ್ಚದಲ್ಲಿ 400 ಕೆವಿ ಉಡುಪಿ-ಕರಿಂದಳ-ವಯನಾಡು ಪವರ್ ಹೈವೇ ವಿದ್ಯುತ್ ಲೈನ್ ಕಾಮಗಾರಿ ಯೋಜನೆ ಜಾರಿಗೊಳ್ಳುತ್ತಿದೆ. ಎಲ್ಲರಿಗೂ ಗುಣಮಟ್ಟ ಹಾಗೂ ನಿರಂತರ ವಿದ್ಯುತ್ ಖಾತ್ರಿಪಡಿಸಿಕೊಳ್ಳಲು ವಿದ್ಯುತ್ ಮಂಡಳಿ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.
ನೆಲ್ಲಿಕುಂಜೆ ವಿಭಾಗವನ್ನು ವಿಭಜಿಸಿ ಹೊಸದಾಗಿ ವಿದ್ಯಾನಗರ, ಬೋವಿಕಾನ, ಅಡೂರು ವಿಭಾಗೀಯ ಕಚೇರಿಗಳನ್ನು ಆರಂಭಿಸಬೇಕು ಎಂಬ ಜನಪ್ರತಿನಿಧಿಗಳ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಸಚಿವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎನ್. ಎ. ನೆಲ್ಲಿಕುನ್ನು ಶಿಲಾಫಲಕ ಅನಾವರಣಗೊಳಿಸಿದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ಶಾಸಕರಾದ ಸಿ.ಎಚ್. ಕುಂಞಂಬು, ಇ. ಚಂದ್ರಶೇಖರನ್, ಎ.ಕೆ.ಎಂ. ಅಶ್ರಫ್, ಕೆ.ಎಸ್.ಇ.ಬಿ ವಿತರಣಾ ನಿರ್ದೇಶಕ ಸಿ. ಸುರೇಶ್ ಕುಮಾರ್, ಕಾಸರಗೋಡು ನಗರಸಭಾ ಅಧ್ಯಕ್ಷ ವಿ.ಎಂ. ಮುನೀರ್, ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಖಾದರ್ ಬದರಿಯಾ, ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಸಿ.ಎ. ಸೈಮಾ, ಕೆಎಸ್ಇಬಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಬಿ. ಅಶೋಕ್, ಕೆಎಸ್ಇಬಿ ಉತ್ತರ ಮಲಬಾರ್ ವಿತರಣಾ ಮುಖ್ಯ ಎಂಜಿನಿಯರ್ ಎನ್.ಎಲ್. ಬಿಜೋಯ್ ಮೊದಲಾದವರು ಉಪಸ್ಥಿತರಿದ್ದರು.