ಮಂಗಳೂರು, ಜೂ 24 (DaijiworldNews/HR): ಮುಲ್ಕಿ ತಾಲೂಕಿನ ಬಳ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳೆಪಾಡಿ, ಕೊಲ್ಲೂರು ಮತ್ತು ಬಳ್ಕುಂಜೆಯಲ್ಲಿ 1,091 ಎಕರೆ ಕೃಷಿ ಭೂಮಿಯನ್ನು ಕೈಗಾರಿಕಾ ವಲಯಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಸರಕಾರದ ಕ್ರಮವನ್ನು ವಿರೋಧಿಸಿ ಹಲವಾರು ಗ್ರಾಮಸ್ಥರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
'ಬಳ್ಕುಂಜೆಯಲ್ಲಿ ಭೂ ಸಂತ್ರಸ್ತರ ಹಿತರಕ್ಷಣಾ ಸಮಿತಿ' ಎಂಬ ಬ್ಯಾನರ್ನಡಿಯಲ್ಲಿ ಜೂನ್ 24 ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ನಿವತ್ತ ಶಿಕ್ಷಕ ನಾಗಭೂಷಣ ರಾವ್ ಮಾತನಾಡಿ, ನಮ್ಮ ಕೃಷಿ ಭೂಮಿಯನ್ನು ಕೈಗಾರಿಕೆಗಳಿಗೆ ನೀಡುವುದಿಲ್ಲ, ನಮ್ಮ ನೆಲ, ಜಲ, ಪರಿಸರ ಸಂರಕ್ಷಿಸಲು ಗ್ರಾಮಸ್ಥರೆಲ್ಲರೂ ಪ್ರತಿಜ್ಞೆ ಮಾಡಬೇಕು ಎಂದರು.
ಫಾದರ್ ಗಿಲ್ಬರ್ಟ್ ಡಿಸೋಜಾ, ಫಾದರ್ ಮೈಕಲ್ ಡಿ ಸಿಲ್ವಾ, ಉದ್ಯಮಿ ಶಂಶುದಿನ್ ಬಳ್ಕುಣ, ಮಾಜಿ ಗ್ರಾ.ಪಂ ಅಧ್ಯಕ್ಷ ದಿನೇಶ್ ಪುತ್ರನ್ ಐಕಳ, ಗ್ರಾ.ಪಂ ಉಪಾಧ್ಯಕ್ಷ ರಾಜೇಶ್ ಶೆಟ್ಟಿ ಭಾಷಣದಲ್ಲಿ ಅಧಿಕಾರಿಗಳ ಭೂ ಆರೋಪ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿದರು.
ಭೂಸಂತ್ರಸ್ತರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡೆನಿಸ್ ಡಿಸೋಜಾ, ಸಮಿತಿ ಸದಸ್ಯೆ ಫ್ರೀಡಾ ರೋಡ್ರಿಗಸ್, ದಿನಕರ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಲ್ಕಿ ಪೊಲೀಸ್ ನಿರೀಕ್ಷಕರು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.
ಈ ಗ್ರಾಮದ ಜನರ ಮುಖ್ಯ ವೃತ್ತಿ ಕೃಷಿಯಾಗಿದ್ದು, ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಪ್ರದೇಶದಲ್ಲಿ ಹೆಚ್ಚಿನ ಪಾಲು ಕೃಷಿ ಭೂಮಿಯೇ ಇದೆ. ಇದರಿಂದ ಗ್ರಾಮಸ್ಥರು ಆತಂಕಿತರಾಗಿದ್ದು, ಪ್ರತಿಭಟನೆಯ ದಾರಿ ಹಿಡಿದಿದ್ದಾರೆ. ಸುಮಾರು 170ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದಾರೆ. ಮಂಡಳಿಯು ಜಾಗ ಸ್ವಾಧೀನಕ್ಕೆ ಮುಂದಾಗಿರುವ ವಿಚಾರ ಗ್ರಾಮಸ್ಥರಿಗೆ ತಡವಾಗಿ ಗೊತ್ತಾಗಿದ್ದು, ಯಾವುದೇ ಮಾಹಿತಿಯನ್ನು ಮುಂಚಿತವಾಗಿ ನೀಡಿರಲಿಲ್ಲ. ಮಂಡಳಿಯ ಈ ನಿರ್ಧಾರವನ್ನು ವಿರೋಧಿಸಿ ಮತ್ತು ಇಡೀ ಪ್ರದೇಶವನ್ನು ಕೈಗಾರಿಕೆ ಸ್ಥಾಪನೆಗೆ ಬಳಕೆ ಮಾಡುವುದನ್ನು ಖಂಡಿಸಿ ಗ್ರಾಮಸ್ಥರು ಬೀದಿಗಿಳಿದಿದ್ದಾರೆ.
ಇದೀಗ ಕೆಐಎಡಿಬಿಯು ಎಲ್ಲಾ ಕುಟುಂಬಗಳಿಗೆ ನೊಟೀಸ್ ನೀಡಿದ್ದು ಮನೆಗಳನ್ನು ಮತ್ತು ಕೃಷಿ ಭೂಮಿಗಳನ್ನು ಬಿಟ್ಟು ಹೊರಡುವಂತೆ ಸೂಚಿಸಿದೆ. ಆದರೆ ತಲೆಮಾರಿನಿಂದ ಬಂದಿರುವ ತಮ್ಮ ಭೂಮಿಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಗ್ರಾಮಸ್ಥರು ಪ್ರಸ್ತುತ ಅಸಹಾಯಕರಾಗಿದ್ದು, ಹೋರಾಟಕ್ಕಿಳಿದಿದ್ದಾರೆ.