ಮಂಗಳೂರು,ಜ 17(MSP): ಡಿಸೆಂಬರ್ ನಲ್ಲಿ ದರೋಡೆಗೊಳಗಾದ ಮಂಗಳೂರು ಮೂಲದ ಯುವಕ ಬಳಿಕ ಜನವರಿಯಲ್ಲಿ ದರೋಡೆಗೈದವನನ್ನೇ ಗುರುತಿಸಿ ಮುಂಬೈನಲ್ಲಿ ಸೆರೆಹಿಡಿದ ಆಶ್ಚರ್ಯಕರ ಘಟನೆ ವರದಿಯಾಗಿದೆ. ಮುಂಬೈ ನಲ್ಲಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಕಂಟ್ರಾಕ್ಟರ್ ಆಗಿರುವ ಪನ್ವೇಲ್ ನಿವಾಸಿ ರಾಜೇಶ್ ಕುಲಾಲ್(31) ದರೋಡೆಕೋರನನ್ನು ಸೆರೆಹಿಡಿದು ಸಾಹಸ ಮೆರೆದಿದ್ದಾರೆ.
ರಾಜೇಶ್ ಕುಲಾಲ್ ಅವರ ಮಡದಿ ಮಂಗಳೂರಿನ ಬ್ಯಾಂಕ್ ನಲ್ಲಿ ವೃತ್ತಿಯಲ್ಲಿದ್ದು, ಅವರನ್ನು ಭೇಟಿಯಾಗಲೆಂದು ಡಿ.29ರಂದು ರಾಜೇಶ್ ಮುಂಬೈಯಿಂದ ರೈಲಿನಲ್ಲಿ ಹೊರಟಿದ್ದರು. ರೈಲು ರತ್ನಗಿರಿ ದಾಟಿದ ಬಳಿಕ ಓರ್ವ ವ್ಯಕ್ತಿ ಪರಿಚಯಿಸಿಕೊಂಡು ಆತ್ಮೀಯತೆ ತೋರಿ ಸ್ನೇಹ ಸಂಪಾದಿಸಿದ್ದ. ಸ್ವಲ್ಪ ಹೊತ್ತಿನ ಬಳಿಕ ಇನ್ನೊಂದು ಕಂಪಾರ್ಟ್ಮೆಂಟ್ಗೆ ತೆರಳಿ ಮೂವರು ಸ್ನೇಹಿತರನ್ನು ಕರೆದುತಂದಿದ್ದ. ಬಳಿಕ ಅವರು ನೀಡಿದ ಆಹಾರ ಮತ್ತು ಪಾನೀಯವನ್ನು ರಾಜೇಶ್ ಕುಲಾಲ್ ಸೇವಿಸಿ ಪ್ರಜ್ಞಾಹೀನರಾಗಿದ್ದರು. ಬೆಳಗ್ಗೆ ಮಂಗಳೂರಿಗೆ ತಲುಪಿದಾಗ ಪ್ರಜ್ಞೆ ಬಂದಿದ್ದು ತನ್ನಲ್ಲಿದ್ದ 2 ಮೊಬೈಲ್, 15 ಸಾವಿರ ರೂ. ನಗದು, ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ನಾಪತ್ತೆಯಾಗಿರುವುದು ರಾಜೇಶ್ ಗಮನಕ್ಕೆ ಬಂದಿದೆ. ಮತ್ತಿನಲ್ಲಿದ್ದ ಅವರು ರೈಲ್ವೆ ಪೊಲೀಸರನ್ನು ಸಂಪರ್ಕಿಸಿ, ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿ ಮೂರು ದಿನ ಚಿಕಿತ್ಸೆ ಪಡೆದು ನಂತರ ಬಿಡುಗಡೆ ಹೊಂದಿದ್ದರು.
ಮರಳಿ ಮುಂಬೈ ತೆರಳಿದ ಅವರು ಆರೋಪಿಗಳಿಗಾಗಿ ಒಂದು ಕಣ್ಣಿಟ್ಟಿದ್ದರು.ಮುಂಬೈಗೆ ತೆರಳಿದ ಕುಲಾಲ್ ಅಂಧೇರಿ ಚರ್ಚ್ ಗೇಟ್ ಬಳಿ ಮುಂಬೈ-ಜಮ್ನಗರ ಎಕ್ಸೃ್ಪ್ರೆಸ್ ರೈಲಿನಲ್ಲಿ ಪ್ರಯಣಿಸುತ್ತಿದ್ದಾಗ ಆರೋಪಿಗಳನ್ನು ಪತ್ತೆ ಹಚ್ಚಿ ಓರ್ವನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ದರೋಡೆ ತಂಡದ ನಾಲ್ವರು ಆರೋಪಿಗಳ ಪೈಕಿ ದೀಪಕ್ ಸಾಹು ಎಂಬಾತನನ್ನು ಸೆರೆ ಹಿಡಿದಿದ್ದು, ಜತೆಗಿದ್ದ ಇತರರು ಓಡಿ ಪರಾರಿಯಾಗಿದ್ದಾರೆ. ಮುಂಬೈ ಜನಸಾಗರದ ಮಧ್ಯೆ ಆರೋಪಿಯನ್ನು ಪತ್ತೆಹಚ್ಚಿದ ರಾಜೇಶ್ ಶೌರ್ಯಕ್ಕೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಆರೋಪಿಗಳು ಗ್ಯಾಂಗ್ ಮಾಡಿ ಕಾರ್ಯಾಚರಿಸುತ್ತಿರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಮುಂಬೈ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.