ಉಡುಪಿ, ಜ 17(MSP): ನಿಷೇಧಿತ ಔಷದ ಸಾಗಾಟ ಆರೋಪದಲ್ಲಿ ಕುವೈತ್ ನಲ್ಲಿ ಬಂಧಿಯಾಗಿದ್ದ ಕುಂದಾಪುರ ಬಸ್ರೂರು ನಿವಾಸಿ ಶಂಕರ್ ಪೂಜಾರಿ (40) ಮಂಗಳವಾರ ರಾತ್ರಿ ಬಿಡುಗಡೆಯಾಗಿದ್ದು, ಇನ್ನೆರಡು ದಿನದಲ್ಲಿ ಊರಿಗೆ ಬರುವ ಸಾಧ್ಯತೆ ಇದೆ.
ಕುವೈತ್ ನಲ್ಲಿ ಉದ್ಯೋಗದಲ್ಲಿದ್ದ ಶಂಕರ್ ಜೂ.13 ರಂದು ಊರಿಗೆ ಬಂದಿದ್ದ ಸಂದರ್ಭ ಅಲ್ಲಿರುವ ಮಹಿಳೆಯೊಬ್ಬರಿಗೆ ಪರಿಚಯಸ್ಥರೊಬ್ಬರು ನೀಡಿದ್ದ ಔಷದ ಪಾರ್ಸೇಲ್ ತೆಗೆದುಕೊಂಡು ಹೋಗಿದ್ದರು. ಅದು ಕುವೈತ್ ನಲ್ಲಿ ನಿಷೇಧಿತ ಔಷಧವಾಗಿದ್ದ ಕಾರಣ ವಿಮಾನ ನಿಲ್ದಾಣದಲ್ಲಿ ಶಂಕರ್ ಬಂಧನಕ್ಕೆ ಒಳಗಾಗಿದ್ದರು.
ಇತ್ತೀಚೆಗೆ ವಿಚಾರಣೆ ಸಂದರ್ಭ ಹಾಜರಾದ ಫಾತಿಮಾ ಎಂಬವರು, ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ತಾನು ಪಡೆದ ಚಿಕಿತ್ಸೆಯ ಪೂರ್ಣ ವಿವರವನ್ನು ಸಲ್ಲಿಸಿ ವೈದ್ಯರ ಚೀಟಿ ಆಧಾರದಲ್ಲಿ ಮಾತ್ರೆ ತರಲು ಹೇಳಿದ್ದಾಗಿ ಸ್ಪಷ್ಟನೆ ನೀಡಿದ್ದರು. ಇದರಿಂದ ಶಂಕರ್ ಪೂಜಾರಿ ಸ್ಮಗ್ಲಿಂಗ್ ಅಥವಾ ಮಾರಾಟದ ಉದ್ದೇಶ ಇರಲಿಲ್ಲ ಎಂಬುವುದು ಸಾಬೀತಾದ ಹಿನ್ನಲೆಯಲ್ಲಿ ನ್ಯಾಯಾಧೀಶರು ಬಿಡುಗಡೆ ಮಾಡಿದ್ದಾರೆ.
ಶಂಕರ್ ಪೂಜಾರಿ ಕಾರ್ಯನಿರ್ವಹಿಸುತ್ತಿದ್ದ ಕಂಪನಿ ಅವರನ್ನು ಕೆಲಸದಿಂದ ಈ ಪ್ರಕರಣದ ಹಿನ್ನಲೆಯಲ್ಲಿ ವಜಾ ಮಾಡಿತ್ತು. ಈಗ ನಿರಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿರುವುದರಿಂದ ಮತ್ತೆ ಕೆಲಸಕ್ಕೆ ಸೇರ್ಪಡೆ ಮಾಡಿಕೊಳ್ಳವ ಅವಕಾಶವಿದೆ.ಫೆ.೧೪ ಕ್ಕೆ ಅವರ ವೀಸಾ ಅವಧಿ ಪೂರ್ಣಗೊಳ್ಳಲಿದ್ದು,ಅದನ್ನು ನವೀಕರಿಸಿಕೊಂಡು ಊರಿಗೆ ಬರುವ ಸಾಧ್ಯತೆ ಇದೆ.