ಕಾಸರಗೋಡು ಜ 17(MSP): ಚಿನ್ನದ ಸರ ಮಾರಾಟಕ್ಕೆಂದು ಬಂದ ವ್ಯಕ್ತಿಯೋರ್ವ ಮಳಿಗೆಯ ಸಿಬ್ಬಂದಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಚಿನ್ನದ ಸರವನ್ನು ಅಲ್ಲೇ ಬಿಟ್ಟು ಪರಾರಿಯಾದ ಘಟನೆ ಕುಂಬಳೆಯಲ್ಲಿ ಜ.15 ರ ಮಂಗಳವಾರ ಸಂಜೆ ಸುಮಾರು 7 ಗಂಟೆ ವೇಳೆಗೆ ನಡೆದಿದೆ.
ಸಾಂದರ್ಭಿಕ ಚಿತ್ರ
ಆತ ಬಿಟ್ಟು ಹೋದ ಚಿನ್ನದ ಸರವನ್ನು ಮಳಿಗೆಯ ಮಾಲಕ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ನೌಶಾದ್ ಎಂಬ ಹೆಸರಿನ ವ್ಯಕ್ತಿ ಕುಂಬಳೆ ರಾಜಧಾನಿ ಜುವೆಲ್ಲರಿಯಲ್ಲಿ ಸರ ಮಾರಾಟಕ್ಕೆ ಬಂದಿದ್ದ. ಅಲ್ಲಿನ ನೌಕರರು ಸಂಶಯದ ಮೇರೆಗೆ ಆತನೊಡನೆ ಹೆಚ್ಚಿನ ಮಾಹಿತಿ ಕೇಳಿದರು. ತನ್ನ ತಾಯಿಯ ಸರ ಮಾರಾಟಕ್ಕೆ ತಂದಿದ್ದೇನೆ ಎಂದರೂ ನೌಕರರಿಗೆ ಸಂಶಯ ನಿವಾರಣೆ ಆಗಲಿಲ್ಲ.
ಅಡ್ಕತ್ ಬೈಲಿನ ಯುವತಿಯೊಬ್ಬಾಕೆಯ ಚಿನ್ನದ ಸರ ಮದುವೆ ಸಮಾರಂಭದ ವೇಳೆ ಕಾಣೆಯಾಗಿತ್ತು. ಈ ಬಗ್ಗೆ ಆಕೆ ಸರ ಕಾಣೆಯಾಗಿರುವ ಬಗ್ಗೆಯೂ, ಅದನ್ನು ಚಿನ್ನದ ಮಳಿಗೆಯಲ್ಲಿ ಮಾರಾಟಕ್ಕೆ ತಂದರೆ ಗಮನಿಸಬೇಕೆಂದೂ ವಾಟ್ಸಪ್ ಸಂದೇಶಗಳನ್ನು ಕೆಲವು ಚಿನ್ನದ ಮಳಿಗೆ ಗಳಿಗೆ ಕಳುಹಿಸಿದ್ದರು. ಮಾರಾಟಕ್ಕೆ ತಂದ ಚಿನ್ನ, ಯುವತಿ ಸಂದೇಶ ಕಳುಹಿಸಿದ ಸರವನ್ನೇ ಹೋಲುತ್ತಿರುವುದರಿಂದ ನೌಕರರು ಮತ್ತಷ್ಟು ಪ್ರಶ್ನೆ ಹಾಕಿದಾಗ ಯಾರಿಗೋ ಫೋನ್ ಮಾಡುವ ನೆಪದಲ್ಲಿಆ ವ್ಯಕ್ತಿ ಅಲ್ಲಿಂದ ಯಾರಿಗೂ ಗೊತ್ತಾಗದೆ ಕಾಲು ಕಿತ್ತಿದ್ದ. ಸರವನ್ನು ಮಳಿಗೆ ಮಾಲೀಕ ಅಬ್ದುಲ್ ಹಮೀದ್ ಪೊಲೀಸರಿಗೆ ಹಸ್ತಾಂತರಿಸಿದರು. ಚಿನ್ನ ಮಾರಾಟಕ್ಕೆ ಬಂದ ವ್ಯಕ್ತಿಯ ಚಿತ್ರ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು , ಪೊಲೀಸರು ತನಿಖೆ ಆರಂಭಿಸಿದ್ದಾರೆ.