ಮಂಗಳೂರು, ಜೂ 23 (DaijiworldNews/SM): ಉಳ್ಳಾಲದಿಂದ ಐದಾರು ನಾಟಿಕಲ್ ಮೈಲ್ ದೂರದಲ್ಲಿ ಸಮುದ್ರ ಮಧ್ಯೆ ವಿದೇಶಿ ಮೂಲದ ಹಡಗು ಮುಳುಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದ.ಕ. ಜಿಲ್ಲಾಡಳಿತದಿಂದ ಕೋಸ್ಟ್ ಗಾರ್ಡ್, ಇತರ ಇಲಾಖೆಗಳೊಂದಿಗೆ ಸಭೆ ನಡೆಸಲಾಗಿದ್ದು, ಇಂಧನ ಸೋರಿಕೆಯಾಗದಂತೆ ಕ್ರಮ ವಹಿಸಲು ಸೂಚನೆ ನೀಡಲಾಗಿದೆ.
ಎಂಜಿನ್ ಆಯಿಲ್, ಫರ್ನಸ್ ಆಯಿಲ್ ಹೊರ ತೆಗೆಯಲು ಕ್ರಮವಹಿಸಲು ಸೂಚಿಸಲಾಗಿದೆ. ಈ ಭಾಗದಲ್ಲಿ ಮೀನುಗಾರಿಕೆ ನಡೆಸದಂತೆ ಸೂಚನೆ ನೀಡಲಾಗಿದೆ. ಅಲ್ಲದೆ, ತೈಲ ಸೋರಿಕೆಯಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.
8 ಸಾವಿರ ಟನ್ ಸ್ಟೀಲ್ ಕೊಯಿಲ್ ಹೇರಿಕೊಂಡು ಹೋಗುತ್ತಿದ್ದ MV PRINCESS MIRAL ಹೆಸರಿನ ಹಡಗು ಉಳ್ಳಾಲದಿಂದ ಐದಾರು ನಾಟಿಕಲ್ ಮೈಲ್ ದೂರದಲ್ಲಿ ಸಮುದ್ರ ಮಧ್ಯೆ ಸಿಲುಕಿಕೊಂಡು, ಸಿರಿಯಾ ದೇಶದ ೧೫ ಮಂದಿ ಸಂಕಷ್ಟದಲ್ಲಿದ್ದರು. ಅವರನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ರಕ್ಷಿಸಿದ್ದಾರೆ.
ನಾವೆಯ ಒಳಭಾಗದಲ್ಲಿ ಸಣ್ಣ ರಂಧ್ರದ ಮೂಲಕ ನೀರು ಒಳಬಂದಿದೆ. ಈ ವೇಳೆ ಈಮೇಲ್ ಮೂಲಕ ಹಡಗಿನ ಸಿಬ್ಬಂದಿಗಳು ನೆರವು ಕೇಳಿದ್ದಾರೆ. ತಕ್ಷಣ ಸ್ಪಂದಿಸಿದ ಮಂಗಳೂರು ಬಂದರಿನ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.