ಉಡುಪಿ, ಜೂ 23 (DaijiworldNews/DB): ಮಾರಾಟಕ್ಕೆಂದು ತಂದಿದ್ದ 18 ಲಕ್ಷ ರೂ. ಮೌಲ್ಯದ 466.960 ಗ್ರಾಂ ಚಿನ್ನಾಭರಣವನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಧ್ಯಪ್ರದೇಶ ಮೂಲದ ಆಲಿಖಾನ್ (31), ಅಮ್ಜದ್ ಖಾನ್ (33), ಇಕ್ರಾರ್ ಖಾನ್ (30), ಗೋಪಾಲ್ ಅಮ್ಲಾವಾರ್ (35) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 466.960 ಗ್ರಾಂ ಚಿನ್ನಾಭರಣ, ಅಂದಾಜು 8 ಲಕ್ಷ ರೂ. ಮೌಲ್ಯದ ಬ್ರೀಜಾ ಕಾರು ಹಾಗೂ ಎರಡು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಏನಿದು ಘಟನೆ?
ಈಶ್ವರ ದಾಲಿಚಂದ್ ಪೊರ್ವಾರ್ ಎಂಬುವವರು ಮುಂಬೈನಲ್ಲಿ ಚಿನ್ನವನ್ನು ಖರೀದಿ ಮಾಡಿ ಮಂಗಳೂರು, ಹೈದರಾಬಾದ್ ಮುಂತಾದೆಡೆಗಳಲ್ಲಿ ಮಾರಾಟ ಮಾಡುವ ವೃತ್ತಿಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅದೇ ರೀತಿ ಜೂ.14ರಂದು ಮುಂಬೈಯಿಂದ ಮಂಗಳೂರಿಗೆ ಚಿನ್ನ ಮಾರಾಟ ಮಾಡಲೆಂದು 466.960 ಗ್ರಾಂ ಚಿನ್ನಾಭರಣವನ್ನು ಸೂಟ್ಕೇಸ್ನಲ್ಲಿ ಹಾಕಿ ಬಸ್ನಲ್ಲಿ ತಂದಿದ್ದರು.
ಜೂ. 16ರಂದು ಈ ಬಸ್ ಬೆಳಗ್ಗೆ 7.15ಕ್ಕೆ ಬೈಂದೂರು ತಲುಪಿದ್ದು, ಅಲ್ಲಿ ಶಿರೂರು ಸಮೀಪ ಹೊಟೇಲ್ ಬಳಿ ಬೆಳಗ್ಗಿನ ಉಪಾಹಾರ ಸೇವನೆಗಾಗಿ ಬಸ್ ನಿಲ್ಲಿಸಿದ್ದಾರೆ. ಈ ವೇಳೆ ಬಸ್ನಲ್ಲಿದ್ದ ಪ್ರಯಾಣಿಕರೆಲ್ಲರೂ ಉಪಾಹಾರ ಸೇವಿಸಲು ಹೊಟೇಲ್ಗೆ ತೆರಳಿದ್ದ ವೇಳೆ ಬಂದಿದ್ದ ಕಳ್ಳರು ಬಸ್ನಲ್ಲಿದ್ದ ಸೂಟ್ಕೇಸ್ನ್ನು ಪಡೆದುಕೊಂಡು ಬಸ್ ಹಿಂಭಾಗಕ್ಕೆ ತೆರಳಿ ಸೂಟ್ಕೇಸ್ ಒಡೆದು ಚಿನ್ನವನ್ನು ಕದ್ದೊಯ್ದಿದ್ದಾರೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಜಕರಣ ದಾಖಲಾಗಿತ್ತು.
ದೂರಿನ ಮೇರೆಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ವಿಷ್ಣುವರ್ಧನ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪ, ಕುಂದಾಪುರ ಉಪ ವಿಭಾಗ ಪೊಲೀಸ್ ಉಪ ಅಧೀಕ್ಷಕ ಶ್ರೀಕಾಂತ ಕೆ. ಅವರ ಸೂಚನೆಯಂತೆ ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಅವರು ತನಿಖೆಯನ್ನು ಕೈಗೆತ್ತಿಕೊಂಡಿದ್ದರು. ಆರೋಪಿಗಳ ಜಾಡು ಹಿಡಿದು ಹೊರಟ ಪೊಲೀಸರು ಜೂ.19ರಂದು ಮಹಾರಾಷ್ಟ್ರದ ದುಲೆ ಜಿಲ್ಲೆಯ ಸೋನ್ಗಿರ್ ಟೋಲ್ಗೇಟ್ನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಬೈಂದೂರು ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ಪಿಎಸ್ಐ ಪವನ ನಾಯಕ, ಅಪರಾಧ ವಿಭಾಗದ ಸಿಬಂದಿಯಾದ ಕೃಷ್ಣ ದೇವಾಡಿಗ, ಸುಜಿತ್, ಪ್ರಿನ್ಸ್, ಶ್ರೀನಿವಾಸ, ರಾಘವೇಂದ್ರ, ನಾಗೇಶ್ ಗೌಡ ಕೂಡಾ ಸಹಕರಿಸಿದ್ದರು.