ಉಡುಪಿ, ಜ 16(SM): ಉಡುಪಿಯ ಮಲ್ಪೆಯಿಂದ ನಾಪತ್ತೆಯಾಗಿರುವ ಮೀನುಗಾರರು ಸುರಕ್ಷಿತವಾಗಿ ಮರಳುವಂತೆ ಪ್ರಾರ್ಥಿಸಿ ಬುಧವಾರ ನಾಪತ್ತೆಯಾದ ಏಳು ಮೀನುಗಾರರ ಕುಟುಂಬ ಸದಸ್ಯರು ಪವಮಾನ ಸೂಕ್ತ ಯಾಗ ನೇರವೇರಿಸಿದರು.
ಶ್ರೀಕೃಷ್ಣಮಠದ ಪರಿಸರದಲ್ಲಿರುವ ಅನಂತೇಶ್ವರ ದೇವಸ್ಥಾನದಲ್ಲಿ ಯಾಗ ನಡೆಯಿತು. ದೇವಸ್ಥಾನದ ಪ್ರದಾನ ಅರ್ಚಕ ವೇದವ್ಯಾಸ ಐತಾಳ್ ಅವರ ನೇತೃತ್ವದಲ್ಲಿ ದೇವರಿಗೆ ವಿಶೇಷ ಪೂಜೆಗಳು ನಡೆದವು. ಮೀನುಗಾರರು ಸುರಕ್ಷಿತವಾಗಿ ಮರಳಲಿ ಎಂದು ಕುಟಂಬ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು.
ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ‘ಮೀನುಗಾರರು ನಾಪತ್ತೆಯಾಗಿ ತಿಂಗಳು ಕಳೆದಿದೆ. ಕರಾವಳಿ ಕಾವಲು ಪಡೆ, ನೌಕಾಪಡೆ ಹಾಗೂ ಪೊಲೀಸ್ ಇಲಾಖೆ ನಿರಂತರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರೂ ಫಲ ಸಿಕ್ಕಿಲ್ಲ. ಮೀನುಗಾರರಿಗೆ ದಿಕ್ಕುತೋಚುತ್ತಿಲ್ಲ. ಹಾಗಾಗಿ, ಅಂತಿಮವಾಗಿ ದೇವರ ಮೊರೆ ಹೋಗಿದ್ದೇವೆ’ ಎಂದು ಹೇಳಿದರು.
ನಾಪತ್ತೆಯಾದ ಮೀನುಗಾರರ ಕುಟುಂಬದ ಸದಸ್ಯರು ಪವಮಾನ ಹೋಮದಲ್ಲಿ ಭಾಗಿಯಾಗಿದ್ದಾರೆ. ಸುರಕ್ಷಿತವಾಗಿ ವಾಪಸ್ ಮರಳಲಿ ಎಂದು ಪ್ರಾರ್ಥಿಸಿದ್ದೇವೆ. ಇದರ, ಜತೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯಸರ್ಕಾರ ಮತ್ತಷ್ಟು ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದರು.