ಮಂಗಳೂರು, ಜ 16(SM): ವಿಜಯಾಬ್ಯಾಂಕನ್ನು ನಷ್ಟದಲ್ಲಿರುವ ದೇನಾ ಮತ್ತು ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲಿನೀಕರಣ ಮಾಡುವ ಕೆಲಸಕ್ಕೆ ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರವೇ ಹೊಣೆ. ಮೊಯ್ಲಿಯವರು ಹಣಕಾಸು ಸಮಿತಿ ಅಧ್ಯಕ್ಷರಾಗಿದ್ದ ವೇಳೆಯೇ ಇದು ಜಾರಿಗೆ ಬಂದಿತ್ತು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿರುವುದು ಸುಳ್ಳಿನ ಕಂತೆಯಾಗಿದೆ ಎಂದು ಕಾಂಗ್ರೆಸ್ ಮುಖಂಡ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಹೇಳಿದ್ದಾರೆ.
ರಾಜಕೀಯ ಪ್ರೇರಿತ, ಆಧಾರ ರಹಿತ ಹಸಿ ಸುಳ್ಳು ಸಂಸದರು ಹೇಳುತ್ತಿದ್ದಾರೆ ಎಂದು ಖಾದರ್ ತಿರುಗೇಟು ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಸಂಸದ ನಳಿನ್ಕುಮಾರ್ ಕಟೀಲು ಅವರು ಸುಳ್ಳು ಪ್ರಚಾರ ಮಾಡುತ್ತಾ ಅದನ್ನೇ ಸತ್ಯ ಎಂದು ಬಿಂಬಿಸುತ್ತಿದ್ದಾರೆ.
ತಮ್ಮ ಸರಕಾರ ಮಾಡಿದ ತಪ್ಪನ್ನು ವೀರಪ್ಪ ಮೊಯ್ಲಿ ಮೇಲೆ ಆರೋಪ ಮಾಡುವುದು ಸರಿಯಲ್ಲ. ಮೊಯ್ಲಿಯವರು ಫೈನಾನ್ಸ್ ಕಮಿಟಿ ಅಧ್ಯಕ್ಷರಾಗಿದ್ದುದು ಹೌದು, ಅದರಲ್ಲಿ ಬಿಜೆಪಿ ನಾಯಕರೂ ಇದ್ದಾರೆ. ಸಂಸದರು ಅಂದು ವಿಲೀನಕ್ಕೆ ವಿರೋಧಿಸಿದರೆ ಅಲ್ಲೇ ಸಮಸ್ಯೆ ಬಗೆಹರಿಯುತ್ತಿತ್ತು. ಆದರೆ ವಿಜಯಾಬ್ಯಾಂಕ್ ಹೆಸರಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಎಲ್ಲರೂ ಒಗ್ಗಟ್ಟಾಗಿ ಬ್ಯಾಂಕ್ ಉಳಿಸಲು ಯತ್ನಿಸೋಣ ಎಂದರು.