ಕಾರ್ಕಳ, ಜೂ 22 (DaijiworldNews/SM): ಪಠ್ಯಪುಸ್ತಕ ಪರಿಷ್ಕರಣೆ ಮಾಡಿ ಕೇಸರಿಕರಣಗೊಳಿಸಿ ರಾಜ್ಯದ ಜನರಿಗೆ ಮೂರ್ಖರನ್ನಾಗಿಸುತ್ತಿದೆ. ಅದರ ಮೂಲಕ ಅರಾಜಕತೆ ಉಂಟು ಮಾಡಲು ಹೊರಟಿದೆ ಎಂದು ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಹೇಳಿದರು.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಾರ್ಕಳ ಬಸ್ ನಿಲ್ದಾಣದ ಬಳಿ ರಾಜ್ಯ ಸರಕಾರದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಯಿಂದ ಪಠ್ಯಪುಸ್ತಕ ಕೇಸರಿಕರಣ ವಿರುದ್ಧ ನಡೆದ ಪ್ರತಿಭಟನಾ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ದೇಶದಲ್ಲಿ ಅಗ್ನಿಪಥ ಯೋಜನೆಗೆ ಯುವಕರಿಂದಲೇ ವಿರೋಧ ವ್ಯಕ್ತವಾಗಿದ್ದು, ಬಿಜೆಪಿ ಸುಳ್ಳು, ಮೋಸ ಗಳ ಮೂಲಕ ಜನರನ್ನು ದಾರಿತಪ್ಪಿಸುತ್ತಿದೆ.
ಸುಳ್ಳು, ಮೋಸಗಳಿಂದ ದೇಶ ಆಳಲು ಸಾಧ್ಯವಿಲ್ಲ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದೆ ಬರುತ್ತದೆ. ಪ್ರಧಾನಿ ಕೇವಲ ಭಾಷಣ, ಪ್ರದರ್ಶನಕ್ಕೆ ಮಾತ್ರ ಸಿಮಿತವಾಗಿದ್ದು, ಕಾಂಗ್ರೇಸ್ ಮೇಲೆ ಆರೋಪ ಮಾಡುತ್ತಿರುವ ಬಿಜೆಪಿಗೆ ಎಂಟು ವರ್ಷದಲ್ಲಿ ಒಂದು ಆರೋಪ ಸಾಬೀತುಗೊಳಿಸಲು ಆಗಿಲ್ಲ ದೇಶದ ಜನರಿಗೆ ಎಲ್ಲಾ ವಿಧಗಳಲ್ಲೂ ಮೂರ್ಖರನ್ನಾಗಿಸುವುದೆ ಇದರ ಉದ್ದೇಶ ಎಂದರು.