ಉಡುಪಿ, ಜೂ 22 (DaijiworldNews/DB): ಮೆಹಂದಿ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಉಡುಪಿಯಲ್ಲಿ ನಡೆದಿದೆ.
ಗಣಪತಿ ಆಚಾರ್ಯ ಎಂಬವರು ಮೃತಪಟ್ಟ ವ್ಯಕ್ತಿ. ಉಡುಪಿ ಜಿಲ್ಲೆಯ ಅಂಬಾಗಿಲು ಪುತ್ತೂರು ಬಳಿ ಘಟನೆ ಸಂಭವಿಸಿದೆ. ಸಂಬಂಧಿಕರ ಮದುವೆಯ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣಪತಿ ಆಚಾರ್ಯ, ಇತರರೊಂದಿಗೆ ಸೇರಿ ಡ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ಕುಣಿದು ಸುಸ್ತಾಗಿ ಅಲ್ಲೇ ಪಕ್ಕದಲ್ಲಿದ್ದ ಕುರ್ಚಿ ಮೇಲೆ ಕುಳಿತುಕೊಂಡಿದ್ದಾರೆ. ಆದರೆ ಕೆಲವೇ ಕ್ಷಣದಲ್ಲಿ ಪಕ್ಕದಲ್ಲಿದ್ದವರಿಗೆ ಒರಗಿ ಕೆಳಕ್ಕೆ ಬಿದ್ದರು. ಕೂಡಲೇ ಸನಿಹದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಹೃದಯಾಘಾತದಿಂದ ಮೃತಪಟ್ಟರು.
ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಗಣಪತಿ ಆಚಾರ್ಯ ಅವರ ಸಾವಿನಿಂದ ಆಘಾತ ಎದುರಾಗಿದ್ದು, ದುಃಖ ಮಡುಗಟ್ಟಿದೆ.