ಮಂಗಳೂರು, ಜೂ 22 (DaijiworldNews/DB): ತಾಂತ್ರಿಕ ದೋಷದಿಂದ ಅರಬ್ಬೀ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ ಸಿರಿಯಾ ಮೂಲದ ಹಡಗಿನಲ್ಲಿದ್ದ ಎಲ್ಲಾ ಸಿಬಂದಿಯನ್ನು ದಡಕ್ಕೆ ಕರೆ ತರಲಾಗಿದ್ದು, ಅವರು ಸದ್ಯ ಕರಾವಳಿ ಕಾವಲು ಪಡೆಯ ಬಳಿ ಸುರಕ್ಷಿತವಾಗಿದ್ದಾರೆ.
ಸದ್ಯ ಕರಾವಳಿ ಕಾವಲುಪಡೆಯ ಬಳಿ ಇರುವ ಎಲ್ಲಾ 15 ಮಂದಿ ಸಿಬಂದಿಯನ್ನು ಪಣಂಬೂರು ಪೊಲೀಸರಿಗೆ ಹಸ್ತಾಂತರಿಸಲಾಗುವುದು. ಬಳಿಕ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಸಮನ್ವಯತೆಯೊಂದಿಗೆ ಎಲ್ಲಾ ಸಿಬಂದಿಯನ್ನು ಯಾವುದಾದರೂ ಹಾಸ್ಟೆಲ್ನಲ್ಲಿ ತಂಗಲು ವ್ಯವಸ್ಥೆ ಮಾಡಲಾಗುವುದು. ಆನಂತರ ನೆಲಮಂಗಲದಲ್ಲಿರುವ ಫಾರಿನರ್ಸ್ ಡಿಟೆಕ್ಷನ್ ಸೆಂಟರ್ಗೆ ಅವರನ್ನು ಸ್ಥಳಾಂತರಿಸಲಾಗುವುದು. ವಲಸಿಗರ ಬ್ಯೂರೋದಿಂದ ಆದೇಶ ಬಂದ ಬಳಿಕ ಸಿರಿಯಾದ ರಾಯಭಾರಿ ಕಚೇರಿ ಮುಖಾಂತರ ಅವರನ್ನು ಅವರ ದೇಶಕ್ಕೆ ಕಳುಹಿಸಿಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
8000 ಸಾವಿರ ಟನ್ ಉಕ್ಕಿನ ತಂತಿಗಳನ್ನು ಹೊತ್ತು ಓಮಾನ್ ನಿಂದ ಈಜಿಪ್ಟ್ ದೇಶಕ್ಕೆ ತೆರಳುತ್ತಿದ್ದ ಸಿರಿಯಾ ಮೂಲದ ಹಡಗೊಂದು ತಾಂತ್ರಿಕ ಸಮಸ್ಯೆಯಿಂದಾಗಿ ಮಂಗಳವಾರ ಉಚ್ಚಿಲ ಸೋಮೇಶ್ವರ ಬಳಿ ಸಮುದ್ರದಲ್ಲಿ ಅಪಾಯದಲ್ಲಿ ಸಿಲುಕಿತ್ತು. ಈ ಹಡಗಿನಲ್ಲಿ ಸುಮಾರು 15 ಮಂದಿ ಸಿಬಂದಿ ಇದ್ದು, ಎಲ್ಲರನ್ನೂ ಕೋಸ್ಟ್ ಗಾರ್ಡ್ ತಂಡ ರಕ್ಷಿಸಿ ಕರೆ ತಂದಿದ್ದರು.