ಬೆಂಗಳೂರು,ಜ 16(MSP):ರಾಜ್ಯ ರಾಜಕಾರಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಕೆದರಿದ್ದು, ಬಿಜೆಪಿಯ ಅಪರೇಷನ್ ಕಮಲದ ವಿರುದ್ದ, ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷರೂ ಕೂಡ ಆಗಿರುವ ಸಿದ್ದರಾಮಯ್ಯ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಮೇಲಿಂದ ಮೇಲೆ ಟ್ವೀಟ್ ಮಾಡಿ ಬಿಜೆಪಿಯವರ ಮೇಲೆ ಹರಿಹಾಯ್ದಿರುವ ಅವರು ಚೌಕಿದಾರ್' ಪ್ರಧಾನಿ ನರೇಂದ್ರ ಮೋದಿಯವರೇ, ನಿಮ್ಮನ್ನು ದೇಶದ ಚೌಕಿದಾರ್ ಎಂದು ಹೇಳಿಕೊಳ್ತೀರಿ. ಆದ್ರೆ ಈಗ ನಮ್ಮ ರಾಜ್ಯದ ಶಾಸಕರನ್ನು ಹೊಟೇಲ್ ಕೋಣೆಗಳಲ್ಲಿ ಕೂಡಿ ಹಾಕಿ ಕಾಯುತ್ತಿರುವ ಚೌಕಿದಾರ್ ಆಗಿಬಿಟ್ಟಿರಲ್ಲಾ..ಛೆ ಎಂದು ವ್ಯಂಗ್ಯವಾಡಿದ್ದಾರೆ.
ಇದಕ್ಕೂ ಮೊದಲಿನ ಟ್ವೀಟ್ ನಲ್ಲಿ ಆಪರೇಷನ್ ಕಮಲ ಮಾಡುವುದು ಬಿಜೆಪಿಗೆ ಹೊಸತೇನಲ್ಲ. ಬಿಜೆಪಿಯವರು ಮೊದಲಿನಿಂದಲೂ ಈ ಪ್ರಯತ್ನ ಮಾಡಿಕೊಂಡು ಬಂದಿದ್ದಾರೆ. ಸರ್ಕಾರವನ್ನು ಕೆಡವಲು ಪ್ರಯತ್ನಿಸುತ್ತಲೇ ಇದ್ದಾರೆ. ಅವರು ಏನೇ ಮಾಡಿದರೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಟೀಕಿಸಿದ್ದಾರೆ. ಅಲ್ಲದೆ "ಗಂಧಾ ನೀಯತ್, ರೆಸಾರ್ಟ್ ವಿಕಾಸ್," ಎಂದು ಕಿಡಿಕಾರಿದ್ದಾರೆ.
ಇದಲ್ಲೆದರ ಬಳಿಕ ಇತ್ತೀಚೆಗೆ ಟ್ವೀಟ್ ಮಾಡಿದ ಅವರು, ನಾವೂ ಕುಸ್ತಿ ಆಡಿದವರು, ಎಂದು ನೇರವಾಗಿ ಬಿಜೆಪಿಯ ಅಪರೇಷನ್ ಕಮಲದ ವಿರುದ್ದವಾಗಿ ಟಾಂಗ್ ನೀಡಿದ್ದಾರೆ. ‘ರಾಜ್ಯದ ಕೆಲವು ಬಿಜೆಪಿ ಶಾಸಕರು ಕೂಡಾ ನಮ್ಮ ಸಂಪರ್ಕದಲ್ಲಿದ್ದಾರೆ. ನಾವೇನು ಕೈಕಟ್ಟಿ ಕೂತಿಲ್ಲ. ರಾಜಕೀಯದ ಅಖಾಡದಲ್ಲಿ ನಾವೂ ಕುಸ್ತಿ ಆಡಿದವರು, ಪಟ್ಟುಗಳು ನಮಗೂ ಗೊತ್ತು’ ಎಂದು ಸಿದ್ದರಾಮಯ್ಯ ಖಾರವಾಗಿಯೇ ಟ್ವೀಟ್ ಮಾಡಿದ್ದಾರೆ.