ಬಂಟ್ವಾಳ, ಜೂ 21 (DaijiworldNews/DB): ಜಿಲ್ಲಾಧಿಕಾರಿ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮದ ಅಂಗವಾಗಿ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಮಂಗಳವಾರ ಬಂಟ್ವಾಳಕ್ಕೆ ಭೇಟಿ ನೀಡಿ ಬಿ.ಸಿ.ರೋಡಿನ ತಾಲೂಕು ಆಡಳಿತ ಸೌಧದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಜಿಲ್ಲಾಧಿಕಾರಿಗಳ ಮುಂದೆ ಅಹವಾಲುಗಳ ಮಹಾಪೂರವೇ ಈ ವೇಳೆ ಬಂತು.
ಬಿ.ಸಿ.ರೋಡು- ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಜಮೀನು ನೀಡಿದವರಿಗೆ ಸೂಕ್ತ ಪರಿಹಾರಧನ ಇನ್ನೂ ಸಿಕ್ಕಿಲ್ಲ ಎಂದು ಸಂತ್ರಸ್ತ ಭೂ ಮಾಲಕರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದರು. ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡರೂ ಇನ್ನೂ ಅನೇಕ ಮಂದಿ ಭೂಮಾಲಿಕರಿಗೆ ಪರಿಹಾರ ಮೊತ್ತ ಪಾವತಿಯಾಗದೆ ಇರುವುದು ಗಮನಕ್ಕೆ ಬಂದಿದೆ. ಪರಿಹಾರ ಸಿಗುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ನಡೆಸುವುದಾಗಿ ಡಿಸಿ ಭರವಸೆ ನೀಡಿದರು.
ಅಜಿಲಮೊಗರು ಕಡೇಶಿವಾಲಯ ಮಧ್ಯೆ ನೇತ್ರಾವತಿ ನದಿಗೆ ನಿರ್ಮಾಣಗೊಳ್ಳುತ್ತಿರುವ ಸೌಹಾರ್ದ ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಬಗ್ಗೆ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಅವರ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು. ಶಂಭೂರಿನ ಎಎಂಆರ್ ಡ್ಯಾಂನಲ್ಲಿ ನೀರು ನಿಲುಗಡೆ ಮಾಡುತ್ತಿರುವುದರಿಂದ ಈ ಭಾಗದ ಕೃಷಿಕರು ತೊಂದರೆ ಅನುಭವಿಸುತ್ತಿದ್ದಾರೆ. ಸ್ಥಳೀಯ ತೋಟಗಳಲ್ಲಿ ನೀರು ನಿಂತು ಕೊಳೆರೋಗ ಬಾಧಿಸುತ್ತಿದೆ. ಆದ್ದರಿಂದ ಸಂತ್ತಸ್ತ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಅವರು ಇದೇ ವೇಳೆ ಒತ್ತಾಯಿಸಿದರು. ದೈವಸ್ಥಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪೂರ್ಣಕಾಲಿಕ ವೈದ್ಯಾಧಿಕಾರಿಯನ್ನು ನೇಮಿಸಬೇಕು ಎಂದೂ ಒತ್ತಾಯಿಸಿದರು. ಮಣಿನಾಲ್ಕೂರು ಸರಪಾಡಿಗೆ ಒಬ್ಬರೇ ವಿಎ ಇರುವುದರಿಂದ ಜನಸಾಮಾನ್ಯರಿಗೆ ಹಲವಾರು ರೀತಿಯಲ್ಲಿ ತೊಂದರೆ ಉಂಟಾಗುತ್ತಿದೆ ಎಂದು ಗ್ರಾಮಸ್ಥರೊಬ್ಬರು ಗಮನ ಸೆಳೆದರು. ಜಿಲ್ಲೆಯಲ್ಲಿ 90 ಗ್ರಾಮ ಲೆಕ್ಕಿಗರು ಬೇಕಾಗಿದ್ದು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಡಿಸಿ ಡಾ. ಕೆ.ವಿ. ರಾಜೇಂದ್ರ ತಿಳಿಸಿದರು.
ದೋಣಿ ಹಾಗೂ ಮರಳು ಕಾಣೆ
ಕೆಲ ದಿನಗಳ ಹಿಂದೆ ಅಕ್ರಮ ಮರಳುಗಾರಿಕೆಗೆ ಗಣಿ ಇಲಾಖೆ ದಾಳಿ ನಡೆಸಿ ಮುಟ್ಟುಗೋಲು ಹಾಕಿ ಪಂಚಾಯತ್ ವಶಕ್ಕೆ ಒಪ್ಪಿಸಿದ್ದ ದೋಣಿ ಹಾಗೂ ಮರಳನ್ನು ಯಾರೋ ಕದ್ದೊಯ್ದಿದ್ದು, ಅಪರಾಧಿಗಳನ್ನು ಪತ್ತೆ ಹಚ್ಚುವ ಕಾರ್ಯ ಅಗಿಲ್ಲ ಎಂದು ಮಣಿನಾಲ್ಕೂರು ಗ್ರಾಪಂ.ಅಧ್ಯಕ್ಷೆ ನಾಗವೇಣಿ ನೇತೃತ್ವದಲ್ಲಿ ಪಂಚಾಯತ್ ಸದಸ್ಯರು ಡಿ.ಸಿ.ಅವರಿಗೆ ದೂರು ಸಲ್ಲಿಸಿದರು. ದೈವಸ್ಥಳ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಮತ್ತು ಸಹಾಯಕರಿಲ್ಲದೇ ಮುಚ್ಚುವ ಹಂತದಲ್ಲಿದ್ದು, ಗ್ರಾಮಸ್ಥರ ಹಿತದೃಷ್ಠಿಯಿಂದ ಸಿಬ್ಬಂದಿಗಳು, ಆರೋಗ್ಯ ಕಾರ್ಯಕರ್ತೆಯರ ನೇಮಿಸುವಂತೆಯು ನಿಯೋಗ ಒತ್ತಾಯಿಸಿತು. ಇದನ್ನು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರಲಾಗುವುದು ಎಂದು ಡಿ.ಸಿ. ಪ್ರತಿಕ್ರಿಯಿಸಿದರು. ಅಲ್ಲಿಪಾದೆಯಲ್ಲಿ ನೆರಳು ನೀಡುತ್ತಿದ್ದ ಮರಗಳನ್ನು ಕಡಿದು ಹಾಕಿರುವ ಬಗ್ಗೆ ವಿಶ್ವನಾಥ ಚಂಡ್ತಿಮಾರ್ ನೇತೃತ್ವದ ರಿಕ್ಷಾ ಚಾಲಕರ ನಿಯೋಗ ದೂರು ಸಲ್ಲಿಸಿತು.
ನೀರಾ ಘಟಕ ಪುನರಾರಂಭಿಸಿ
ತುಂಬೆಯಲ್ಲಿರುವ ನೀರಾ ಘಟಕ ಮುಚ್ಚಿರುವುದರಿಂದ ಅಲ್ಲಿನ ಯಂತ್ರೋಪಕರಣಗಳು ತುಕ್ಕು ಹಿಡಿದು ಲಕ್ಷಾಂತರ ರೂ.ನಷ್ಟವಾಗುತ್ತಿದೆ. 9/11ನಿಂದಾಗಿ ಜನರು ಸಂಕಷ್ಟಕ್ಕೊಳಗಾಗಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ತುಂಗಪ್ಪ ಬಂಗೇರ ತಿಳಿಸಿದರು. ನೀರಾ ಘಟಕಕ್ಕೆ ಖುದ್ದು ತೆರಳಿ ಪರಿಶೀಲನೆ ನಡೆಸಲಾಗುವುದು ಎಂದು ಡಿಸಿ ತಿಳಿಸಿದರು. ತಾಲೂಕು ಆಡಳಿತ ಸೌಧದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾಹಿತಿ ಕೇಂದ್ರ ಸ್ಥಾಪಿಸುವಂತೆ ತಾಪಂ ಮಾಜಿ ಸದಸ್ಯ ಸೋಮಪ್ಪ ಕೋಟ್ಯಾನ್ ತಿಳಿಸಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಅವರಿಗೆ ಜಿಲ್ಲಾಧಿಕಾರಿಯವರು ಸೂಚಿಸಿದರು.
ಸಜೀಪಮುನ್ನೂರು ಗ್ರಾಮದ ಶಾರದ ನಗರದಲ್ಲಿ ಹಿಂದೂ ರುದ್ರಭೂಮಿಗೆ ಮಂಜೂರಾದ ಜಮೀನಿನಲ್ಲಿ ತತ್ಕ್ಷಣ ಸ್ಮಶಾನ ನಿರ್ಮಿಸಬೇಕು, ನರಿಕೊಂಬು ಗ್ರಾಮದ ನಾಯಿಲ ಪ್ರದೇಶದ ರೈತರು ರಾಜ ಕಾಲುವೆ ಒತ್ತುವರಿಯನ್ನು ತೆರವುಗೊಳಿಸಬೇಕು ಮತ್ತು ತೋಡಿನ ಹೂಳೆತ್ತಿ ರೈತರಿಗಾಗುವ ನಷ್ಟವನ್ನು ಪರಿಹರಿಸಬೇಕು ಎಂದೂ ಒತ್ತಾಯಿಸಲಾಯಿತು. ತುಂಬೆ ಡ್ಯಾಂ ಸಂತ್ರಸ್ತ ರೈತರಿಗೆ ವರತೆ ಪ್ರದೇಶಕ್ಕೆ ಪರಿಹಾರ ದೊರಕದಿರುವ ಬಗ್ಗೆ ಬಂಟ್ವಾಳ ತಾಲೂಕು ರೈತ ಸಂಘದ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್ ಅವರು ದೂರು ನೀಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕೃಷಿ ಇಲಾಖೆಯ ಮೂಲಕ ವರತೆ ಪ್ರದೇಶ ಗುರುತಿಸಿ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಪಿಂಕ್ ಟಾಯ್ಲೆಟ್: ಡಿ.ಸಿ.ಗರಂ
ಬಿ.ಸಿ.ರೋಡಿನ ತಾಲೂಕು ಆಡಳಿತ ಸೌಧದ ಗೇಟ್ ಗೆ ತಾಗಿಕೊಂಡು ಪುರಸಭೆ ಪಿಂಕ್ ಟಾಯ್ಲೆಟ್ ನಿರ್ಮಿಸುತ್ತಿರುವ ಬಗ್ಗೆ ಆರಂಭದಲ್ಲೇ ಗರಂ ಆದ ಜಿಲ್ಲಾಧಿಕಾರಿಯವರು ಪುರಸಭಾ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ಸ್ಥಳದಲ್ಲಿ ಶೌಚಾಲಯ ನಿರ್ಮಿಸಿದರೆ ಮಹಿಳೆಯರು ಹೋಗಲು ಸಾಧ್ಯವಾಗುವುದಿಲ್ಲ. ಶೀಘ್ರ ಬೇರೆ ಸೂಕ್ತ ಸ್ಥಳ ಗುರುತಿಸಿ ಶೌಚಾಲಯ ನಿರ್ಮಿಸುವಂತೆ ಸೂಚಿಸಿದರು.
ಮಿನಿವಿಧಾನಸೌಧ ನಿರ್ಮಾಣದ ವೇಳೆ ತಾತ್ಕಾಲಿಕ ನೆಲೆಯಲ್ಲಿನಿರ್ಮಿಸಿದ್ದ ತಾಲೂಕು ಕಚೇರಿಯನ್ನು ತೆರವುಗೊಳಿಸಿ, ಪೇಯ್ಡ್ ಪಾರ್ಕಿಂಗ್ ಅಥವಾ ಪಿಂಕ್ ಟಾಯ್ಲೆಟ್ ನಿರ್ಮಿಸಬಹುದೆಂಬ ಸಲಹೆಯು ಕೇಳಿ ಬಂತು.
ಸಹಾಯಕ ಕಮಿಷನರ್ ಮದನ್ ಮೋಹನ್, ತಹಶೀಲ್ದಾರ್ ಡಾ. ಸ್ಮಿತಾ ರಾಮು ಮತ್ತಿತರರು ಉಪಸ್ಥಿತರಿದ್ದರು.