ಮಂಗಳೂರು, ಜ 16(MSP): ದಕ್ಷಿಣ ಕನ್ನಡ ಜಿಲ್ಲೆಯ ಆರ್ಎಸ್ಎಸ್ ಮತ್ತು ಹಿಂದು ಸಂಘಟನೆಗಳ ಮುಖಂಡರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಗುಪ್ತಚರ ಇಲಾಖೆ ವರದಿ ನೀಡಿದೆ ಎಂಬ ಬೆನ್ನಲ್ಲೇ, ಹಿಂದೂ ಮುಖಂಡರ ಹತ್ಯೆ ಸಂಚು ಆರೋಪದಲ್ಲಿ ದಿಲ್ಲಿಯ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಕಾಸರಗೋಡಿನ ಚೆಂಬರಿಕದ ತಸ್ಲಿಂ ಅಲಿಯಾಸ್ ಡಾನ್ ಅಲಿಯಾಸ್ ಮುಹತಸಿಂ ತಸ್ಲಿಂ (41) ಬಗ್ಗೆ ರೋಚಕ ಮಾಹಿತಿಗಳು ಹೊರಬಿದ್ದಿದೆ.
ಆರೋಪಿ ತಸ್ಲಿಂ ಆರ್ಎಸ್ಎಸ್ ನೇತಾರ ಡಾ| ಕಲ್ಲಡ್ಕ ಪ್ರಭಾಕರ ಭಟ್, ಹಿಂದೂ ಸಂಘಟನೆಗಳ ನೇತಾರರಾದ ಶರಣ್ ಪಂಪ್ವೆಲ್, ಜಗದೀಶ್ ಶೇಣವ ಮೊದಲಾದವರ ಹತ್ಯೆಗೂ ಸಂಚು ರೂಪಿಸಿರುವ ಬಗ್ಗೆ ಹಾಗೂ ಭಯೋತ್ಪಾದಕ ಸಂಘಟನೆಯ ನಂಟು ಹೊಂದಿದ್ದಾನೆಂಬ ಮಾಹಿತಿ ಆಧಾರದಲ್ಲಿ ದಿಲ್ಲಿ ಪೊಲೀಸರ ವಿಶೇಷ ತನಿಖಾ ತಂಡ ಕೇರಳ ಪೊಲೀಸರ ಸಹಾಯದಿಂದ ಇತ್ತೀಚೆಗೆ ತಾನೆ ಬಂಧಿಸಿದ್ದರು.
ಆದರೆ ಆಘಾತಕಾರಿ ವಿಚಾರವೆಂದರೆ ಕೇರಳದ ಬಿಜೆಪಿ ಪಕ್ಷದ ಹಾಗೂ ಬಿಜೆಪಿ ಮುಖಂಡರ ಜತೆ ನಿಕಟ ನಂಟು ಹೊಂದಿದ್ದ ಮುಹತಸಿಂ ತಸ್ಲಿಂ, ಕೇರಳ ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಲ್ಲೂ ಗುರುತಿಸಿಕೊಂಡಿದ್ದ. ಹೀಗಾಗಿ ಈತ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡು ಬಲಪಂಥೀಯನಂತೆ ಕಾಣಿಸಿಕೊಂಡು "ಬೆನ್ನಹಿಂದಿದ್ದ ಚೂರಿ ಹಾಕುವ" ತಂತ್ರ ಅನುಸರಿಸಿದ್ದನೇ ಎನ್ನುವ ಸಂಶಯ ಕಾಡತೊಡಗಿದೆ.
ಕಾಸರಗೋಡು ಡಾನ್ ಎಂದೇ ಕುಖ್ಯಾತಿಗೆ ಬಂದಿದ್ದ ಆರೋಪಿ ಬಿಜೆಪಿ ವೇದಿಕೆಗಳಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. ಕೇರಳ ಮಾತ್ರವಲ್ಲದೇ ಕರ್ನಾಟಕ ಬಿಜೆಪಿ ನಾಯಕರೊಂದಿಗೂ ಸಂಪರ್ಕ ಹೊಂದಿರುವ ತಸ್ಲಿಂ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಬಿಜೆಪಿ ಮೋರ್ಚಾದ ಉಪಾಧ್ಯಕ್ಷರಾಗಿರುವ ರಹೀಂ ಉಚ್ಚಿಲ್ ಜೊತೆ ತೆಗೆದಿರುವ ಫೋಟೋ ವೈರಲ್ ಆಗುತ್ತಿದೆ. ಅತ್ತ ಕಡೆ ತಸ್ಲಿಂ ಬಿಜೆಪಿ ನಂಟಿನ ವಿಚಾರ ಹಾಗೂ ಆತನ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗುತ್ತಿದ್ದಂತೆ ಬಿಜೆಪಿ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ.
ಈತನ ವಿರುದ್ದ ಇತರ ಆರೋಪಗಳು
ತಸ್ಲೀಂ ವಿರುದ್ದ ಆರ್ಎಸ್ಎಸ್ ಮುಖಂಡರ ಹತ್ಯೆಗೆ ಸಂಚು ನಡೆಸಿದ ಆರೋಪ ಪ್ರಮುಖವಾಗಿ ಕೇಳಿಬಂದಿದೆ. ಇದಲ್ಲದೇ ಆತನ ವಿರುದ್ದ ಕಾಸರಗೋಡು, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ನಡೆಯುವ ಸಣ್ಣಪುಟ್ಟ ಗಲಭೆಗಳೂ ಕೋಮು ಹಿಂಸಾಚಾರದ ಸ್ವರೂಪ ಪಡೆದುಕೊಳ್ಳುವಲ್ಲಿ ಮುಹತಾಸಿಂ ಹಾಗೂ ಅವನಂಥವರ ಕೈವಾಡವಿದೆ ಎಂಬುವುದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ
ಇದಲ್ಲದೇ ಮುಹತಸಿಂ ವಿರುದ್ದ ಬೇಕಲ ಪೊಲೀಸ್ ಠಾಣೆಯಲ್ಲಿ 2 ನಕಲಿ ಪಾಸ್ ಪೋರ್ಟ್ ಪ್ರಕರಣ, ಮನೆಗೆ ನುಗ್ಗಿ ಹಲ್ಲೆ ಮತ್ತು ಬೇಕಲದಲ್ಲಿ ಎಸ್.ಐ ಯಾಗಿದ್ದ ವಿಪಿನ್ ಅವರಿಗೆ ಬೆದರಿಕೆ ಕೇಸು ಕೂಡಾ ದಾಖಲಾಗಿದೆ. ಕಾಶ್ಮೀರ ಉಗ್ರಗಾಮಿ ಸಂಘಟನೆಗಳಿಗೆ ಯುವಕರ ನೇಮಕಾತಿ ವಿಚಾರಕ್ಕೆ ಸಂಬಂಧಿಸಿ ಇಂಟರ್ ಪೋಲ್ ಮತ್ತು ಕೇಂದ್ರ ಗುಪ್ತಚರ ವಿಭಾಗ ಕೂಡಾ ಈತನನ್ನು ಈ ಹಿಂದೆ ಹಲವು ಬಾರಿ ವಿಚಾರಣೆ ನಡೆಸಿರುವುದು ಬೆಳಕಿಗೆ ಬಂದಿದೆ.
ಐಷಾರಾಮಿ ಜೀವನದ ನಡೆಸುತ್ತಿದ್ದ ತಸ್ಲೀಂ
ತನ್ನ ಎಳೆಯ ವಯಸ್ಸಿನಲ್ಲೇ ಮುಂಬೈಗೆ ತೆರಳಿ,ಅಲ್ಲಿ ಕೆಲಸ ಮಾಡುತ್ತಿದ್ದ ತಸ್ಲೀಂ ಅಲ್ಲಿಯವರೊಂದಿಗೆ ಬೆರೆತು ಹಣ ಸಂಪಾದಿಸಿ, ಆಗಾಗ್ಗೆ ವಿದೇಶಕ್ಕೂ ಹೋಗಿಬರುತ್ತಿದ್ದ. ಜತೆಗೆ ತವರು ಕಾಸರಗೋಡಿಗೂ ಬರುತ್ತಿದ್ದ. ಪದೇ ಪದೆ ಗಲ್ಪ್ಗೆ ತೆರಳುತ್ತಿದ್ದ ಈತ ಇದಕ್ಕಾಗಿ ನಕಲಿ ಪಾಸ್ಪೋರ್ಟ್ಗಳನ್ನೂ ತಯಾರಿಸಿಕೊಂಡಿದ್ದ. ವಿದೇಶದಲ್ಲಿ ಮದ್ಯ ವ್ಯಾಪಾರಿಗಳ ಜತೆ ಸೇರಿ ಅಪಾರ ಆಸ್ತಿ ಗಳಿಸಿದ್ದ. ಬಳಿಕ ವ್ಯಾಪಾರದಲ್ಲಿ ಅಲ್ಲಿ ಎರಡು ತಂಡಗಳ ನಡುವೆ ಘರ್ಷಣೆ ನಡೆಯುತ್ತಿದ್ದಾಗ ಊರಿಗೆ ವಾಪಸಾಗಿದ್ದ. ತಸ್ಲೀಂನನ್ನು ಪತ್ತೆಹಚ್ಚಲೆಂದು ಅಲ್ಲಿಂದ ವಿರೋಧಿ ಬಣವೊಂದು ಕಾಸರಗೋಡಿಗೂ ಬಂದಿತ್ತು. ಆದರೆ ಆ ಬಣವನ್ನು ಈತನ ಗ್ಯಾಂಗ್ ಮಂದಿ ಹೆದರಿಸಿ ವಾಪಸ್ ಕಳುಹಿಸಿದ್ದರು ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.