ಉಡುಪಿ, ಜೂ 20(DaijiworldNews/SM): ಸಾಮಾಜಿಕಜಾಲತಾಣ ಎಂಬುದು ಮಹಾಅಸ್ತ್ರ. ಅದನ್ನು ಹೇಗೆ ಬಳಸಿಕೊಳ್ಳಬೇಕೆಂಬ ಚಾಕಚಕ್ಯತೆಯನ್ನು ನಾವು ಕಲಿತರೇ ಯಶಸ್ಸು ಲಭಿಸುತ್ತದೆ ಎಂದು ಹಿರಿಯ ಪತ್ರಕರ್ತ ಎಮ್.ಎಸ್.ರಾಘವೇಂದ್ರ ಹೇಳಿದರು.
ಅವರು ಸೋಮವಾರ ಎಂ.ಜಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗ, ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿ ಮತ್ತು ಐ.ಕ್ಯು.ಎ.ಸಿ ಜಂಟಿಯಾಗಿ ಆಯೋಜಿಸಿದ ರಾಜ್ಯ ಮಟ್ಟದ ನವ ಮಾಧ್ಯಮದಲ್ಲಿ ಹೊಸ ಸಾಧ್ಯತೆಗಳು ಕಾರ್ಯಗಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಂಪಾದನೆ ವಿಷಯದ ಕುರಿತಾಗಿ ಮಾತನಾಡಿದರು.
ಬರಾಕ್ ಒಬಾಮ ತನ್ನ ಎರಡನೇ ಅವಧಿಯ ಅಮೇರಿಕಾ ಅಧ್ಯಕ್ಷೀಯ ಚುನಾವಣೆಯನ್ನು ಗೆಲ್ಲಲು ಸಾಮಾಜಿಕ ಜಾಲತಾಣ ಸಹಕಾರಿಯಾಗಿತ್ತು. ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ರೈತ ಚಳುವಳಿಯಲ್ಲಿಯೂ ಸಾಮಾಜಿಕ ಜಾಲತಾಣ ಪ್ರಮುಖ ಪಾತ್ರ ವಹಿಸಿತ್ತು. ಹೀಗೆ ಸಾಮಾಜಿಕ ಜಾಲತಾಣಗಳು ಇಂದಿನ ದಿನಗಳಲ್ಲಿ ಪ್ರಬಲ ಅಸ್ತ್ರವಾಗಿ ಮಾರ್ಪಾಡಾಗಿದ್ದು, ಅದನ್ನು ವೇದಿಕೆಯಾಗಿ ಬಳಸಿಕೊಂಡು ಮೌಲ್ಯಯುತ ವಿಚಾರಧಾರೆಗಳನ್ನು ಜನರಿಗೆ ತಲುಪಿಸಲು ಸಾಧ್ಯವಿದೆ ಎಂದರು.
ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್, ಫೇಸ್ ಬುಕ್ ಗಳಿಂದ ನಾವು ಕಂಟೆಂಟ್ ಗಳ ವೀಕ್ಷಣೆಗಳ ಸಂಖ್ಯೆಯನ್ನು ಜಾಸ್ತಿ ಮಾಡುವ ಭರದಲ್ಲಿ ವಿಷಯಗಳು ಮೌಲ್ಯವನ್ನು ಕಳೆದುಕೊಳ್ಳಬಾರದು. ವೀಕ್ಷಣಾ ಸಂಖ್ಯೆಗಳ ಬೆನ್ನತ್ತಿ ಹೋದರೆಮೌಲ್ಯ ಕುಸಿಯುತ್ತದೆ. ವೀಕ್ಷಕ ವರ್ಗ ಯಾರೆಂದು ತಿಳಿದುಕೊಂಡು ಕಂಟೆಂಟ್ ರೆಡಿ ಮಾಡಬೇಕು, ಆಗ ಸಂಪಾದನೆಯ ಜೊತೆಗೆ ನಮ್ಮ ಮೌಲ್ಯತೆಯೂ ಉಳಿಯುತ್ತದೆ ಎಂದು ನುಡಿದರು.
ಕಾರ್ಯಗಾರದಲ್ಲಿ ಕರಾವಳಿಯಲ್ಲುಂಟು ನೂರೆಂಟು ಕಂಟೆಂಟ್ ವಿಚಾರನ್ನು ಕಾಪುವಿನ ಶಟರ್ ಬಾಕ್ಸ್ ಫಿಲಂಸ್ ಸಚಿನ್.ಎಸ್.ಶೆಟ್ಟಿ, ಸಾಮಾಜಿಕ ಜಾಲತಾಣದಲ್ಲಿ ಸಾಹಿತ್ಯ: ನನ್ನ ಅನುಭವ ವಿಷಯವನ್ನು ಕಲಾವಿದೆ ಮಾನಸಿ ಸುಧೀರ್, ನಿರೂಪಣೆ ಆಕಾಶದಷ್ಟು ಅವಕಾಶ ವಿಷಯವನ್ನು ನಿರೂಪಕಿ ಶಮೀರಾ ಬೆಳುವಾಯಿ, ಧ್ವನಿ ಜಗತ್ತಿನ ಧಣಿ ಆಗೋದು ಹೇಗೆ? ವಿಷಯವನ್ನು ಹಿನ್ನಲೆ ಧ್ವನಿ ಕಲಾವಿದ ಬಡಕ್ಕಿಲ ಪ್ರದೀಪ್ ಮಂಡಿಸಿದರು.
ವಿಭಿನ್ನವಾಗಿ ಮಂಗಳೂರು ಸಮಾಚಾರ ಪತ್ರಿಕೆಯ ಮುಖಪುಟವನ್ನು ಎಂ.ಜಿ.ಎಂ ಕಾಲೇಜಿನ ತೃತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿಗಳು ಪ್ರದರ್ಶಿಸುವ ಮೂಲಕ ಕಾರ್ಯಗಾರವನ್ನು ಉದ್ಘಾಟಿಸಿದರು. ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ| ದೇವಿದಾಸ್ ನಾಯ್ಕ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮಂಜುನಾಥ್ ಕಾಮತ್, ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಸುಚಿತ್ ಕೋಟ್ಯಾನ್ ಉಪಸ್ಥಿತರಿದ್ದರು.