ಕಾಸರಗೋಡು, ಜೂ 20 (DaijiworldNews/HR): ಮುಳಿಯಾರುನಲ್ಲಿ ಎಂಡೋಸಲ್ಫಾನ್ ಸಂತ್ರಸ್ಥರ ಪುನರ್ವಸತಿ ಗ್ರಾಮ ಒಂದು ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದು ಕೇರಳ ಸ್ಥಳೀಯಾಡಳಿತ ಸಚಿವ ಎಂ.ವಿ ಗೋವಿಂದನ್ ಮಾಸ್ಟರ್ ಹೇಳಿದರು.
ಸೋಮವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎಂಡೋಸಲ್ಫಾನ್ ಸಂತ್ರಸ್ತರ ಸೆಲ್ ಸಭೆಯಲ್ಲಿ ಮಾತನಾಡಿದ ಅವರು, 25 ಎಕರೆ ಸ್ಥಳದಲ್ಲಿ ಪುನರ್ವಸತಿ ಗ್ರಾಮ ನಿರ್ಮಾಣಗೊಳ್ಳುತ್ತಿದ್ದು, ಕಾಮಗಾರಿ ಆರಂಭಗೊಳ್ಳಲಿದೆ ಎಂದು ಸಚಿವರು ಹೇಳಿದರು.
ಸುಪ್ರೀಂ ಕೋರ್ಟ್ ಆದೇಶದಂತೆ ಸಂತ್ರಸ್ಥರಿಗೆ ಶೀಘ್ರದಲ್ಲೇ ಧನಸಹಾಯ ವಿತರಣೆ ಪೂರ್ಣಗೊಳಿಸಲಾಗುವುದು. ಜುಲೈ ಅಂತ್ಯದೊಳಗೆ ಬಹುತೇಕ ಮಂದಿಗೆ ಧನಸಹಾಯ ವಿತರಣೆ ಪೂರ್ಣಗೊಳಿಸಲಾಗುವುದು. ಇದುವರೆಗೆ 1308 ಮಂದಿಗೆ 51.68ಕೋಟಿ ರೂ ಒದಗಿಸಲಾಗಿದೆ.
ಸುಪ್ರೀಂ ಕೋರ್ಟ್ ಆದೇಶ ಜಾರಿಗೆ ಬರುವ ತನಕ ಉಚಿತ ಪಡಿತರ, ಪಿಂಚಣಿ, ಶೈಕ್ಷಣಿಕ ಸೌಲಭ್ಯ ಹಾಗೂ ಸಾಲ ಮನ್ನಾ ಸೇರಿದಂತೆ 287,76,140,36 ರೂ. ನೀಡಲಾಗಿದೆ ಎಂದು ಹೇಳಿದರು.
ಎಂಡೋಸಲ್ಫಾನ್ ಸಂತ್ರಸ್ತ ಪಟ್ಟಿಯಲ್ಲಿ ಒಳಗೊಂಡ ರೋಗಿಯ ಮನೆಯಲ್ಲಿ ಬೇರೆ ರೋಗಗ್ರಸ್ತರಿದ್ದರೆ ಆ ರೋಗಿಗೂ ಉಚಿತ ಚಿಕಿತ್ಸೆ ನೀಡಲು ವಿಶೇಷ ಚಿಕಿತ್ಸಾ ಮಂಡಳಿಯನ್ನು ರಚಿಸಲಾಗುವುದು.
ಎಣ್ಮಕಜೆ, ಪುಲ್ಲೂರು ಗ್ರಾಮಗಳಲ್ಲಿ ಸಾಫಲ್ಯ ಯೋಜನೆಯಡಿ ಸಾಯಿ ಟ್ರಸ್ಟ್ ನಿರ್ಮಿಸಿದ ಮನೆಗಳಲ್ಲಿ ಉಳಿದಿರುವ 10 ಮನೆಗಳನ್ನು ಜೂನ್ ೨೪ ರಂದು ಅದ್ರಷ್ಟ ಚೀಟಿ ಎತ್ತುವ ಮೂಲಕ ಸಂತ್ರಸ್ಥರಿಗೆ ಒದಗಿಸಲಾಗುವುದು . ಮನೆ ಅಗತ್ಯ ಇರುವವರ ಪಟ್ಟಿಯನ್ನು ಶೀಘ್ರ ತಯಾರಿಸಲಾಗುವುದು. ಮನೆಗೆ ವಿದ್ಯುತ್ ಹಾಗೂ ರಸ್ತೆ ಒದಗಿಸಲಾಗುವುದು . ಬಡ್ಸ್ ಶಾಲೆಗಳ ನ್ನು ಸರಕಾರ ಪಡೆದುಕೊಳ್ಳುವಂತೆ ಮನವಿ ಮಾಡಲು ತೀರ್ಮಾನಿಸಲಾಯಿತು.
ಶಾಸಕರಾದ ಎಂ.ರಾಜಗೋಪಾಲನ್ ಮತ್ತು ಇ. ಚಂದ್ರಶೇಖರನ್, ಸಿ.ಎಚ್.ಕುಂಞಂಬು, ಎನ್.ಎ.ನೆಲ್ಲಿಕುನ್ನು, ಎ.ಕೆ.ಎಂ.ಅಶ್ರಫ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್, ಸೆಲ್ ಅಪರ ಜಿಲ್ಲಾಧಿಕಾರಿ ಎಸ್. ಶಶಿಧರನ್ ಪಿಳ್ಳೆ, ಉಪ ಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ಮಾಜಿ ಸಂಸದ ಪಿ ಕರುಣಾಕರನ್, ಮಾಜಿ ಶಾಸಕ ಕೆ.ಪಿ.ಕುಂಞಿಕಣ್ಣನ್ ಸೆಲ್ ಸದಸ್ಯರು ಸ್ಥಳೀಯ ಸ್ವಯಂ ಆಡಳಿತದ ಅಧ್ಯಕ್ಷರು, ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಎಂಡೋಸಲ್ಫಾನ್ ವಿಪತ್ತು ಸಂತ್ರಸ್ತರ ಪ್ರತಿನಿಧಿಗಳು ಉಪಸ್ಥಿತರಿದ್ದರು.