ಕುಂದಾಪುರ, ಜೂ 20 (DaijiworldNews/MS): ನಾವುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುದ್ರು ಎನ್ನುವ ಪುಟ್ಟ ದ್ವೀಪಕ್ಕೆ ಇನ್ನೂ ಸೇತುವೆಯಾಗಿಲ್ಲ. ಕುದ್ರುವಿಗೆ ಸಂಪರ್ಕವೆಂದರೆ ಅದೊಂದು ಸಾಹಸ. ಇನ್ನೂ ಕೂಡಾ ಈ ಕುದ್ರುವಿಗೆ ಸಂಪರ್ಕ ಸೇತುವೆಯಾಗಿಲ್ಲ ಎಂದರೆ ವಿಪರ್ಯಾಸವೇ ಸರಿ.. ಕುದ್ರುವಿಗೆ ಹೋಗಬೇಕಾದರೆ ದೋಣಿಯ ಮೂಲಕವೇ ಹೋಗಬೇಕು. ಈ ದ್ವೀಪದ ಜನರಿಗೆ ದೋಣಿಯೇ ಆಸರೆ. ಕುಡಿಯುವ ನೀರು, ವಿದ್ಯುತ್ ಹೊರತು ಪಡಿಸಿದರೆ ಈ ಕುದ್ರುವಾಸಿಗಳಿಗೆ ಯಾವುದೇ ಸೌಲಭ್ಯವಿಲ್ಲ. ಮುಖ್ಯವಾಗಿ ಬೇಕಾಗಿರುವುದು ಸಂಪರ್ಕ ಸೇತುವೆ. ಕನಿಷ್ಠ ತೂಗು ಸೇತುವೆಯನ್ನಾದರೂ ಮಾಡಿಕೊಡಿ ಎನ್ನುತ್ತಿದ್ದಾರೆ ಅಂಗಲಾಚುತ್ತಿದ್ದಾರೆ ಇಲ್ಲಿಯ ಜನತೆ.
ಮೂಲಸೌಕರ್ಯಗಳ ಕೊರತೆಯಿಂದ ಈ ದ್ವೀಪದಲ್ಲಿದ್ದ ಕುಟುಂಬಗಳು ಈ ಸ್ಥಳವನ್ನೇ ತೊರೆದು ವಲಸೆ ಹೋಗುತ್ತಿದ್ದಾರೆ. ಈ ಕುದ್ರುವಿನಿಂದ ನಾವುಂದಕ್ಕೆ ಬರಬೇಕಿದ್ದರೆ ದೋಣಿಯನ್ನೇ ಅವಲಂಬಿಸಬೇಕಾದ ಕಾರಣ ಇಲ್ಲಿನ ನಿವಾಸಿಗಳು ಬೇರೆ ಕಡೆ ಹೋಗಿದ್ದಾರೆ. ಈಗ ಆರು ಕುಟುಂಬಗಳು ಇಲ್ಲಿವೆ. ಇಲ್ಲಿನ ಮಕ್ಕಳು ಶಾಲೆಗೆ ಹೋಗುವುದು ಕೂಡಾ ಸವಾಲೇ ಆಗಿದೆ. ದೋಣಿಯ ಮೂಲಕವೇ ದಿನ ಮಕ್ಕಳು ಶಾಲಾ ಕಾಲೇಜುಗಳಿಗೆ ಹೋಗಿ ಬರಬೇಕು.
ಕೋವಿಡ್ ಸಂದರ್ಭದಲ್ಲಿ ಇಲ್ಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳನ್ನು ಶಿಕ್ಷಣ ಇಲಾಖೆ ದೋಣಿಯ ಮೂಲಕ ಪರೀಕ್ಷೆಗೆ ಕರೆದುಕೊಂಡು ಹೋಗುವ ದೃಶ್ಯ ಸಾಕಷ್ಟು ಸುದ್ಧಿ ಮಾಡಿತ್ತು. ಆದರೆ ಇದು ನಿತ್ಯ ಅಂಗನವಾಡಿಯಿಂದ ಕಾಲೇಜು ತನಕ ಹೋಗುವ ಮಕ್ಕಳು ಎದುರಿಸುವ ಸವಾಲು.
ಒಂದರೆರಡು ದಿನ ಮಳೆ ಬಂದರೂ ಕುದ್ರುವಿಗೆ ನೀರು ಜಲಾವೃತ್ತವಾಗುತ್ತದೆ. ಹೊಳೆಯಲ್ಲಿ ನೀರಿನ ಸಳೆತವೂ ಜೋರಾಗಿರುತ್ತದೆ. ದೋಣಿಗೆ ಹುಟ್ಟು ಹಾಕುವುದು ಕೂಡಾ ಕಷ್ಟ. ದೊಡ್ಡ ದೋಣೆಯನ್ನು ನೀರಿನ ರಭಸಕ್ಕೆ ನಿಯಂತ್ರಿಸುವುದು ತುಂಬಾ ಕಷ್ಟ. ಅಲ್ಲದೆ ತೆಂಗಿನ ಮರಗಳ ತೋಟ ಇರುವುದರಿಂದ ನೆರೆ ಸಂದರ್ಭ ದೋಣಿಯಲ್ಲಿ ಸುರಕ್ಷಿತ ಪ್ರದೇಶಕ್ಕೆ ಹೋಗುವುದು ಕಷ್ಟವಾಗುತ್ತದೆ.
ಸಂಬಂಧಪಟ್ಟ ಜನಪ್ರತಿನಿಧಿಗಳು ಮನಸು ಮಾಡಿದರೆ ಕುದ್ರುವಿಗೆ ಸೇತುವೆ ನಿರ್ಮಾಣ ಮಾಡಿಕೊಡುವುದು ದೊಡ್ಡ ಕೆಲಸವೆನ್ನಲ್ಲ. ಕೋಟಿ ಕೋಟಿ ಯೋಜನೆಗಳನ್ನು ರೂಪಿಸುವ ಸರ್ಕಾರಗಳಿಗೆ ಈ ಕುದ್ರುವಿಗೊಂದು ಸಣ್ಣ ಸೇತುವೆ ಮಾಡುವುದು ಕಷ್ಟವೆನ್ನಲ್ಲ. 50 ಮೀಟರ್ ಉದ್ದದ ಸೇತುವೆ ನಿರ್ಮಾಣ ಮಾಡಿಕೊಟ್ಟರೆ ಕುದ್ರು ಜನರಿಗೆ ಅನುಕೂಲವಾಗುತ್ತದೆ. ಇಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಿದರೂ ಕೂಡಾ ಎರಡು ಪ್ರಯೋಜನವೂ ಆಗಬಹುದು. ಈ ಕುದ್ರುವಿನಲ್ಲಿ ತಲೆತಲಾಂತರದಿಂದ ವಾಸಿಸುತ್ತಿರುವ ಜನರ ಕೂಗು ಸರ್ಕಾರಕ್ಕೆ ಮುಟ್ಟಬೇಕಾಗಿದೆ.